ನಂದಿನಿ ಮನುಪ್ರಸಾದ್ ನಾಯಕ್
ಹಿರಿಯ ಚೇತನ ಕಾಯಕಯೋಗಿ ಬಸವಣ್ಣ
ಸುತ್ತೂರು ಶ್ರೀಗಳ ಬಣ್ಣನೆಚೆನೈನಲ್ಲಿ ಬಸವ ಮಂಟಪ-ಬಸವೇಶ್ವರ ಪುತ್ಥಳಿ ಅನಾವರಣ
ಚೆನ್ನೈ: ಜಗಜ್ಯೋತಿ ಬಸವಣ್ಣನವರ ಆದರ್ಶ ಮತ್ತು ತತ್ವಗಳನ್ನು ಪಾಲಿಸುವುದು ಸಮಾಜಕ್ಕೆ ಅತ್ಯಗತ್ಯ. ಏಕೆಂದರೆ ಬಸವಣ್ಣನವರ ತತ್ವಗಳು ಜಾತೀಯತೆ, ಅಸ್ಪೃಶ್ಯತೆ, ಭ್ರಷ್ಟಾಚಾರ ಮತ್ತು ಹಿಂಸಾಚಾರದಂತಹ ಸಮಸ್ಯೆಗಳನ್ನು ಹೋಗಲಾಡಿಸಲು ‘ಬಸವತತ್ವ’ ಎಂಬ ಔಷಧವನ್ನು ನೀಡುತ್ತವೆ ಎಂದು ಸುತ್ತೂರು ವೀರ ಸಿಂಹಾಸನಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಬಣ್ಣಿಸಿದರು.


ಚೆನ್ನೈನ ಬಸವೇಶ್ವರ ಸೋಷಿಯಲ್ ಟ್ರಸ್ಟ್, ವೀರಶೈವ ಲಿಂಗಾಯತ ವೆಲ್ಫೇರ್ ಅಸೋಷಿಯೇಷನ್, ಶ್ರೀ ಕಾಶಿ ವಿಶ್ವನಾx ರ್-ವಿಶ್ವಲಕ್ಷ್ಮಿ ಆಲಯ ಟ್ರಸ್ಟ್ ಮತ್ತು ಚೆನ್ನೈ ಹೊರನಾಡು ಕನ್ನಡಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕೊಳ್ಳುಮೇಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಸವ ಮಂಟಪ ಉದ್ಘಾಟನೆ ಹಾಗೂ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀವರ್ಚನ ನೀಡಿದರು.

ಬಸವಣ್ಣನವರು ೧೨ನೇ ಶತಮಾನದ ಸಾಮಾಜಿಕ ಸುಧಾರಕರಾಗಿದ್ದರು. ತತ್ವಜ್ಞಾನಿ ಯಾಗಿದ್ದರು ಮತ್ತು ಕವಿ, ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆ ಮತ್ತು ಅಸಮಾನತೆಗಳನ್ನು ವಿರೋಧಿಸಿದರು. ಅವರು ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಸಾರಿದರು ಮತ್ತು ಎಲ್ಲರನ್ನು ಒಳಗೊಂಡ ಅನುಭವ ಮಂಟಪವನ್ನು ಸ್ಥಾಪಿಸಿದರು. ಇದು ಆಧ್ಯಾತ್ಮಿಕ ಹಾಗೂ ಲೌಕಿಕ ವಿಚಾರಗಳನ್ನು ಚರ್ಚಿಸಲು ವೇದಿಕೆಯಾಗಿತ್ತು ಎಂದು ಶ್ರೀಗಳು ನುಡಿದರು.
ಯುವ ಪೀಳಿಗೆಗೆ ಬಸವೇಶ್ವರ ಸಿದ್ದಾಂತಗಳು ದಾರಿದೀಪವಾಗಿವೆ. ಬಸವಣ್ಣ ಸರ್ವ ಕಾಲಕ್ಕೂ, ಸರ್ವರಿಗೂ ಬೆಳಕಾಗಿ ಒಡಮೂಡುತ್ತಾರೆ. ೧೨ನೇ ಶತಮಾನದಲ್ಲಿ ತೆರೆದ ಅನುಭವ ಮಂಟಪ ಎಂಬ ಮಹಾ ಪರಿಕಲ್ಪನೆ ಇಂದು ನಮಗೆ ಸಂವಿಧಾನವಾಗಿ ಹೊರಹೊಮ್ಮಿದೆ. ಸಮಾನತೆ, ಭ್ರಾತೃತ್ವ ಹಾಗೂ ಸಾಮರಸ್ಯವನ್ನು ಜಗತ್ತಿಗೆ ಸಾರಿದ ಮಹಾತಪಸ್ವಿ ಕಾಯಕಯೋಗಿ ಬಸವಣ್ಣನವರ ಜೀವನ ಆದರ್ಶವನ್ನು ಪ್ರತಿಯೊಬ್ಬರೂ ಕೈಗೂಡಿಸಿಕೊಂಡರೆ ಜಗತ್ತಿನಲ್ಲಿ ಅಶಾಂತಿಯೇ ಇರಲಾರದು ಎಂದು ತಿಳಿಸಿದರು.
ಹಾಗೆಯೇ ಇಂದಿನ ಈ ಮೌಲಿಕ ಕಾರ್ಯಕ್ರಮದ ಆಯೋಜಕರುಗಳಾದ ಬಸವೇಶ್ವರ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶಂ, ಉದ್ಯಮಿ ಬಿ.ರಾಜೇಶ್ ಊಟಿ, ಶಿವಮೂರ್ತಿ(ಚೆನ್ನೈ) ಹಾಗೂ ತಂಡದವರು ಮತ್ತು ಮೈಸೂರಿನವರೇ ಆದರೂ ಚೆನ್ನೈನಲ್ಲೇ ನೆಲೆಸಿ, ಕನ್ನಡ ಸಂಸ್ಕೃತಿಯನ್ನು ಪಸರಿಸಿ, ತಮ್ಮೆಲ್ಲರ ಪ್ರೀತಿ ವಿಶ್ವಾಸ ಗಳಿಸಿರುವ ದಾಕ್ಷಾಯಿಣಿ ದಳವಾಯಿ ಅವರಿಗೂ ಹಾಗೆಯೇ ಅವರ ತಂದೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಮಹದೇವಪ್ಪ ಉಡಿಗಾಲ ಅವರು ಸೇರಿದಂತೆ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.

ಜನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಮಾತನಾಡಿ, ಇಂದಿನ ಈ ಕಾರ್ಯಕ್ರಮ ನಿಜಕ್ಕೂ ಒಂದು ಚರಿತ್ರಾರ್ಹ ಕಾರ್ಯಕ್ರಮ ಎಂದರೇ ತಪ್ಪಾಗಲಾರದು. ಏಕೆಂದರೆ ದೂರದ ಹೊರನಾಡಲ್ಲಿ ಬಸವ ಪುತ್ಥಳಿಯನ್ನು ಪ್ರತಿಷ್ಠಾಪಿಸಿ, ಬಸವ ಮಂಟಪ ನಿರ್ಮಿಸುವ ಮೂಲಕ ಬಸವ ಪರಂಪರೆಯ ತತ್ವಗಳನ್ನು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಳ್ಳುವ ಉದ್ದೇಶ ಹೊಂದಿರುವ ಕಾರ್ಯಕ್ರಮವಿದು ಎಂದರು.ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೂ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಇಂತಹ ಮಹನೀಯರ ಪುತ್ಥಳಿಯನ್ನು ಇಂದು ದೂರದ ತಮಿಳುನಾಡಿನಲ್ಲಿ ಜಗದ್ಗುರು ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ಅನಾವರಣಗೊಳಿಸಿರುವುದು ಹಾಗೂ ಬಸವ ಮಂಟಪ ನಿರ್ಮಿಸಿ ಉದ್ಘಾಟನೆಗೊಂಡಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಾದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊ.ಡಾ.ಎನ್.ರಾಮನ್, ಯೂನಿವರ್ಸಿಟಿ ಆಫ್ ಮಡ್ರಾಸ್(ಚೆನ್ನೈ) ವಿಭಾಗದ ಮುಖ್ಯಸ್ಥರಾದ ತಮಿಳ್ ಸೆಲ್ವಿ, ತಮಿಳುನಾಡು ಸರ್ಕಾರದ ವೀರಮಾಮುನಿವರ್ ಪ್ರಶಸ್ತಿ ವಿಜೇತರಾದ ಹಾಲ್ದೊರೈ, ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜಿನ ನಿವೃತ್ತ ಪ್ರೊ.ಶಿವಕುಮಾರ್ ಎ.ಆರ್, ಸೇರಿದಂತೆ ಹಲವಾರು ಗಣ್ಯರು, ಸ್ಥಳೀಯ ನಿವಾಸಿಗಳು, ಸಾವಿರಕ್ಕೂ ಹೆಚ್ಚು ಕನ್ನಡಿಗರು ಹಾಗೂ ಬಸವ ಅನುಯಾಯಿಗಳು, ಮುಖಂಡರು ಉಪಸ್ಥಿತರಿದ್ದರು.

ಇಂದಿನ ಅನುಭವ ಮಂಟಪ ನೃತ್ಯ ರೂಪಕ: ಇದೇ ವೇಳೆ ಹೊರನಾಡ ಕನ್ನಡಿಗರು ಸಂಚಾಲಕರಾದ ದಾಕ್ಷಾಯಿಣಿ ಎಸ್. ದಳವಾಯಿ ಅವರ ನೇತೃತ್ವದ ತಂಡ ‘ಇಂದಿನ ಅನುಭವ ಮಂಟಪ ನೃತ್ಯ ರೂಪಕ’ವನ್ನು ಪ್ರದರ್ಶಿಸಿ ಗಮನ ಸೆಳೆದರು.
ಸುತ್ತೂರು ಶ್ರೀಗಳ ಆಶೀವರ್ಚನದಲ್ಲಿನ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ. ಜೀವನದಲ್ಲಿ ಕಷ್ಟ-ಸುಖ ಎಂಬುದು ಸಾಮಾನ್ಯ. ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ ಎಲ್ಲವನ್ನೂ ಜಯಿಸಿ ಗೆಲ್ಲುವವನೇ ನಿಜವಾದ ಸಾಧಕ ಎಂಬ ಪದಗಳಿಗೆ ಹಾಗೂ ಬಸವಣ್ಣನವರ ತತ್ವಗಳನ್ನು ಬಿಂಬಿಸುವ ಮಾದರಿಯ ‘ಹೆದರದಿರಿ… ಹಿಂಡನಗಲಿ ಬಂದವರ ಹಾಗೆ ಭರವಸೆಯ ಕಳೆಯದಿರಿ … ನಾವಿದ್ದೇವೆ… ನಾವಿದ್ದೇವೆ. ನಮ್ಮನುಭವಗಳ ಬೆಳಕಲ್ಲಿ ಈ ಸುತ್ತಲಿನ ಪರಿಸರಕ್ಕೆ ಅರಿವನೆರೆದಿದ್ದೇವೆ… ಇದು ಶರಣ ಕಲ್ಯಾಣ.. ಇದರ ಗುರಿ ವಿಶ್ವ ಕಲ್ಯಾಣ’ ಎಂಬಿತ್ಯಾದಿ ಸಾಲುಗಳುಳ್ಳ ಅರ್ಥಪೂರ್ಣ ನೃತ್ಯ ರೂಪಕ ಪ್ರದರ್ಶಿಸಿಸಿದ್ದು, ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.