ನಂದಿನಿ ಮೈಸೂರು.
ಭಾರತ ವಿಶ್ವಗುರುವಾಗಲು ಶಿಕ್ಷಕರೇ ಕಾರಣ: ಸಾಹಿತಿ ಬನ್ನೂರು ರಾಜು
ಮೈಸೂರು: ನಮ್ಮ ಭಾರತವು ಮಂಗಳನ ಅಂಗಳಕ್ಕೆ ಹೋಗಿಯಾಯ್ತು , ಚಂದಿರನ ಲೋಕಕ್ಕೂ ಇಳಿದಾಯ್ತು , ಈಗ ವಿಶ್ವವೇ ವಿಸ್ಮಯ ಪಡುವಂತೆ ಸೂರ್ಯನತ್ತಲೂ ಹೆಜ್ಜೆ ಇರಿಸಿದ್ದು ವಿಜ್ಞಾನ ಲೋಕದಲ್ಲಿ ಅಸಾಮಾನ್ಯ ಸಾಧನೆ ಮಾಡಿ ಅಕ್ಷರಶಃ ಭಾರತವು ಸರ್ವ ವಿಷಯದಲ್ಲೂ ವಿಶ್ವ ಗುರುವಾಗಿದ್ದು ನಿಜವಾಗಿಯೂ ಇದಕ್ಕೆ ಮೂಲ ಕಾರಣಕರ್ತರು ನಮ್ಮ ಶಿಕ್ಷಕರೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.
ನಗರದ ಲಕ್ಷ್ಮೀಪುರಂನಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸಾಮಾಜಿಕ ಸೇವಾ ವೇದಿಕೆ ಸಂಯುಕ್ತವಾಗಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ‘ನಹಿ ಜ್ಞಾನೇನ ಸದೃಶಂ’ ಎಂಬ ಉಕ್ತಿ ಯಂತೆ ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲವಾಗಿದ್ದು ಜ್ಞಾನವೇ ಎಲ್ಲರ ಬದುಕಿನ ಬಹು ದೊಡ್ಡ ಶಕ್ತಿಯಾಗಿದ್ದು ಇಂಥಾ ಜ್ಞಾನವನ್ನು ನೀಡಿ ಶಿಷ್ಯರನ್ನು ಉದ್ಧರಿಸುವ ಶಿಕ್ಷಕರಿಗೆ ಸಮ ಯಾವುದೂ ಇಲ್ಲವೆಂದರು.
ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇರುವಷ್ಟು ಮಹತ್ವ ಬೇರೆ ಯಾವುದೇ ಕ್ಷೇತ್ರಗಳಿಗೂ ಇಲ್ಲ. ಏಕೆಂದರೆ ಎಲ್ಲಾ ಕ್ಷೇತ್ರಗಳಿಗೂ ಗುರು ಶಿಕ್ಷಣ ಕ್ಷೇತ್ರವೇ. ಶಿಕ್ಷಣ ಮೊದಲು, ನಂತರ ಮಿಕ್ಕಿದ್ದೆಲ್ಲ. ಹಾಗೆಯೇ ಶಿಕ್ಷಕ ವೃತ್ತಿಗಿರುವಷ್ಟು ಗೌರವ, ಘನತೆ, ನೆಲೆ, ಬೆಲೆ ಬೇರಾವ ವೃತ್ತಿಗಳಿಗೂ ಇಲ್ಲ. ಎಲ್ಲಾ ವೃತ್ತಿಗಳ ಸೃಷ್ಠಿಗೂ, ಎಲ್ಲಾ ಕ್ಷೇತ್ರಗಳ ನಿರ್ಮಾಣಕ್ಕೂ ಶಿಕ್ಷಕರೇ ಕಾರಣರು. ಇಂಥಾ ಪವಿತ್ರವಾದ ಶ್ರೇಷ್ಠಾತಿಶ್ರೇಷ್ಠ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣದ ಮೂಲಕ ನವ ಭಾರತವನ್ನು ಕಟ್ಟಿ ಸಹಸ್ರ ಸಹಸ್ರ ಶ್ರೇಷ್ಠ ಶಿಕ್ಷಕರು ಇತರರಿಗೆ ಮಾದರಿಯಾಗಿ ದೇಶದಲ್ಲಿ ಆಗಿಹೋಗಿದ್ದಾರೆ. ಅಂತಹವರ ಸಾಲಿನಲ್ಲಿ ಭಾರತದಂತೆಯೇ ಎದ್ದು ಕಾಣುವ ಹೆಸರು ಭಾರತ ರತ್ನ ಸರ್ವಪಲ್ಲಿ ರಾಧಾಕೃಷ್ಣನ್ ಅವರದು. ಭಾರತ ದೇಶದ ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಓರ್ವ ದಿನಗೂಲಿ ನೌಕರನ ಮಗನಾಗಿ ಜನಿಸಿದರೂ ಇಚ್ಚಾಶಕ್ತಿ , ಕ್ರಿಯಾಶಕ್ತಿ , ಜ್ಞಾನಶಕ್ತಿ , ಪ್ರಾಮಾಣಿಕತೆ, ಪರಿಶ್ರಮ ಇದ್ದರೆ ಏನುಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಮ್ಮೆದುರು ಕಾಣುತ್ತಾರೆ ದೇಶ ಕಂಡ ಶ್ರೇಷ್ಠ ಶಿಕ್ಷಕ, ಶ್ರೇಷ್ಠ ಶಿಕ್ಷಣ ತಜ್ಞ, ಶ್ರೇಷ್ಠ ತತ್ವಜ್ಞಾನ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೆಯ ರಾಷ್ಟ್ರಪತಿ ನಮ್ಮ ರಾಧಾಕೃಷ್ಣನ್ ಎಂದು ತಿಳಿಸಿದರು.
ಇದೇ ವೇಳೆ ಸಾಮಾಜಿಕ ಸೇವಾ ವೇದಿಕೆ ವತಿಯಿಂದ ಕೊಡ ಮಾಡುವ ಪ್ರಸ್ತುತ ಸಾಲಿನ “ಗುರು ಸೇವಾ ರತ್ನ ಪ್ರಶಸ್ತಿ” ಯನ್ನು ರಾಜ್ಯ ಶಾಸ್ತ್ರದ ಹಿರಿಯ ಉಪನ್ಯಾಸಕ ಎನ್.ಎಸ್.ಪಶುಪತಿ ಅವರಿಗೆ ನೀಡಿ ಗೌರವಿಸಲಾಯಿತಲ್ಲದೆ ಉಪನ್ಯಾಸಕಿ ಶೋಭಾ ಅವರ ನ್ನೂ ಸನ್ಮಾನಿಸಲಾಯಿತು. ಹಾಗೆಯೇ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ವಿಶ್ರಾಂತ ಪ್ರಾಂಶುಪಾಲರೂ ಆದ ಸಾಹಿತಿ ಕಾಡ್ನೂರು ಶಿವೇಗೌಡರು ಅಭಿನಂದನಾ ಭಾಷಣ ಮಾಡಿ ವೇದಿಕೆಯಲ್ಲಿ ಗೌರವಾನ್ವಿತ ರೆಲ್ಲರನ್ನೂ ಅಭಿನಂದಿಸಿದರು. ‘ಗುರುಸೇವಾರತ್ನ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಎನ್. ಎಸ್. ಪಶುಪತಿ ಅವರು ಶಿಕ್ಷಣ ಕ್ಷೇತ್ರದಲ್ಲಿ ತಾವು ಸಲ್ಲಿಸುತ್ತಿರುವ ಅಳಿಲು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ತಮ್ಮನ್ನು ಸನ್ಮಾನಿಸಿ ಗೌರವಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾಲೇಜಿನ ಪ್ರಾಂಶುಪಾಲ ರಾದ ಟಿ.ಸಿ.ಸುದೀಪ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಕುರಿತು ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.
ಶಿಕ್ಷಣದ ಬಗ್ಗೆ ಕಾಳಜಿಯುಳ್ಳ ಗಣ್ಯರಾದ ವಿಘ್ನೇಶ್ವರ ಭಟ್, ಫೋಟೋ ರಾಜಗೋಪಾಲ್, ಪಟ್ನಮ್ ರಾಮು ಹಾಗೂ ಉಪನ್ಯಾಸಕ ರಾದ ಡಾ.ಕಾಳಿ ಪ್ರಸಾದ್, ಬಿ.ಎಂ. ಮಹದೇವನಾಯಕ , ಕೆ.ಎ.ಜಯಾನಂದ ಪ್ರಸಾದ್, ಎಸ್. ಎಂ. ತುಳಸೀದಾಸ್, ಜಿ.ರಾಘವೇಂದ್ರ , ನಂದೀಶ್, ಕೆ.ವಸುಂಧರಾ, ಎಸ್.ಪುಷ್ಪಾ, ಪಿ.ಪೂರ್ಣಿಮಾ, ಹೆಚ್. ಕೆ. ನಾಗರತ್ನ, ಬಿ.ಹೆಚ್.ವನಿತಾ, ಎಂ.ಕೆ.ಬೇಬಿ, ಸಾಲಿಗ್ರಾಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎನ್. ಜೆ. ಮಂಜುನಾಥ, ವಿಶ್ರಾಂತ ಪ್ರಾಚಾರ್ಯ ನಂಜುಂಡಸ್ವಾಮಿ ಹಾಗೂ ಸಾಮಾಜಿಕ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.