ಕವಿಗಳು ಸಮಾಜಮುಖಿಯಾಗಬೇಕು :ಸಾಹಿತಿ ಬನ್ನೂರು ರಾಜು

ನಂದಿನಿ ಮೈಸೂರು

ಕವಿಗಳು ಸಮಾಜಮುಖಿಯಾಗಬೇಕು :ಸಾಹಿತಿ ಬನ್ನೂರು ರಾಜು

ಮೈಸೂರು: ಇಡೀ ದೇಶವನ್ನು ಕಾಡುತ್ತಿರುವ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕವಿಯಾದವರು ಕಿವಿಯಾಗಿ, ಕಣ್ಣಾಗಿ ಸ್ಪಂದಿಸಿ ತಮ್ಮ ಲೇಖನಿಯಿಂದ ಸಮಾಜಮುಖಿ ಕಾವ್ಯ ಕೃಷಿ ಮಾಡಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಕುವೆಂಪು ನಗರದ ಎರಡನೇ ಹಂತದ ನಿಮಿಷಾಂಬ ನಗರದ ಲ್ಲಿರುವ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಆವರಣದಲ್ಲಿ ಮಂಡ್ಯದ ಕರುನಾಡು ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕರುನಾಡು ಕವಿಗೋಷ್ಠಿ ಹಾಗೂ “ಕರುನಾಡು ರಾಜ್ಯೋತ್ಸವ ರತ್ನ ಪುರಸ್ಕಾರ” ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಖಡ್ಗ ವಾಗಲಿ ಕಾವ್ಯ ಎಂಬ ಮಾತಿಗೆ ಅನ್ವರ್ಥವಾಗಿ ಕವಿಗಳು, ಸಾಹಿತಿಗಳು ತಮ್ಮ ಸಮಾಜೋಪಯೋಗಿ ಶ್ರೇಷ್ಠ ಬರವಣಿಗೆಯಿಂದ ಸಮಾಜವನ್ನು ತಿದ್ದಿ ತೀಡುವ ಜನೋಪಯೋಗಿಯಾದ ನಾಡು ಕಟ್ಟುವ ದೇಶೋದ್ಧಾರದ ಕೆಲಸ ಮಾಡಬೇಕೆಂದರು.
ಇವತ್ತಿನ ಕಾಲಘಟ್ಟದಲ್ಲಿ ನಮ್ಮದು ಧ್ವನಿ ಸತ್ತ ಮೂಕ ಸಮಾಜವಾಗಿದ್ದು ರಾಜ್ಯ, ದೇಶ, ಸೇರಿದಂತೆ ಇಡೀ ಜಗತ್ತು ಅನೇಕ ಸಾಮಾಜಿಕ ತಲ್ಲಣಗಳ ಪ್ರಕ್ಷುಬ್ದ ಪರಿಸ್ಥಿತಿಯಿಂದ ಬಗೆ ಹರಿಯದ ಸಮಸ್ಯೆಗಳಿಂದ ಉತ್ತರವಿಲ್ಲದ ಪ್ರಶ್ನೆಗಳ ಸುಳಿಯಲ್ಲಿ ಬಳಲುತ್ತಿದೆ. ಹಾಗಾಗಿ ಇದಕ್ಕೆಲ್ಲ ಕವಿಗಳ ಲೇಖನಿ ಉತ್ತರವಾಗಬೇಕು. ನಮ್ಮಲ್ಲಿ ಎರಡು ರೀತಿಯ ಮಾತುಗಳುಂಟು. ಒಂದು ಹೃದಯದ ಅಥವಾ ಮನಸ್ಸಿನ ಮಾತು, ಮತ್ತೊಂದು ನಾಲಿಗೆಯ ಮಾತು. ವಿಪರ್ಯಾಸವೆಂದರೆ ಇವತ್ತು ಹೃದಯದ ಮಾತುಗಳಿಗಿಂತ ಹೆಚ್ಚಾಗಿ ನಾಲಿಗೆ ತುದಿಯ ಮಾತುಗಳೇ ವಿಜೃಂಭಿಸುತ್ತಿವೆ. ಹಾಗಾಗಿ ಇಂದು ಆತ್ಮಸಾಕ್ಷಿಯುಳ್ಳ ಹೃದಯದ ಮಾತುಗಳ ಅಗತ್ಯವಿದೆ. ಮನಸ್ಸಾಕ್ಷಿಯುಳ್ಳ ಹೃದಯದ ಮಾತುಗಳಿಂದ ಮನುಷ್ಯತ್ವದ ಸಮಾಜವನ್ನು ಕಟ್ಟಬಹುದಾಗಿದ್ದು ಈ ದಿಸೆಯಲ್ಲಿ ಕವಿಗಳು ಕಾವ್ಯ ಕೃಷಿ ಮಾಡಬೇಕೆಂದು ತಿಳಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಕರುನಾಡು ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ.ಅಭಿನಂದನ್ ಅವರು ಕಾರ್ಯಕ್ರಮದ ಧ್ಯೇಯೋದ್ದೇಶ ಕುರಿತು ಸವಿವರವಾಗಿ ಮಾತನಾಡಿ ಎಲ್ಲ ರನ್ನೂ ಆತ್ಮೀಯವಾಗಿ ಸ್ವಾಗತಿಸಿ ದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರಾದ ಜಾನಪದ ಕ್ಷೇತ್ರದಿಂದ ಬಯಲಾಟ ಕಲಾವಿದರಾದ ಶಿವಣ್ಣಗೌಡ ಮಾದುರಾಯ ಬಿರಾದಾರ, ಶಿವಮೂರ್ತೆಪ್ಪಾ ಶಿದ್ದಪ್ಪ ಮೇನೆದಾರ ಸಾ, ಸಾಹಿತ್ಯ ಕ್ಷೇತ್ರದಿಂದ ಸಿದ್ದರಾಮ ಸಿ. ಸರಸಂಜಿ, ಡಾ.ಪಿ.ಎಂ.ಭೋಜೆ, ಮೌನೇಶ್, ಚಂದು ವಾಗೀಶ, ಕುರುವತ್ತಿಗೌಡ ಪೊಲೀಸ್ ಪಾಟೀಲ, ಪಿ.ಎಸ್.ಮುನಿಲಕ್ಷ್ಮಿ , ಕೆ.ಜಿ.ಹೊನ್ನಾದೇವಿ, ನಳಿನಿ, ಶಿಕ್ಷಣ ಕ್ಷೇತ್ರದಿಂದ ಸಿ. ಎಂ. ಜ್ಯೋತಿ, ಎಂ.ನಾಗರಾಜು, ಎನ್. ಎಂ. ಜನಿವಾರದ, ಸಮಾಜಸೇವಾ ಕ್ಷೇತ್ರದಿಂದ ಕೆ. ನಾಗೇಂದ್ರ, ಹಾಗೂ ಸಂಘಟನಾ ಕ್ಷೇತ್ರದಿಂದ ಉದಯ ರವಿ ಅವರಿಗೆ ಪ್ರಸ್ತುತ ಸಾಲಿನ “ಕರುನಾಡು ರಾಜ್ಯೋತ್ಸವ ರತ್ನ” ಪುರಸ್ಕಾರ ನೀಡಿ ಸನ್ಮಾನಿಸಲಾ ಯಿತು.
ಇದೇ ವೇಳೆ ಕರುನಾಡು ಹೆಸರಿನಲ್ಲಿ ಕವಿ ಗೋಷ್ಠಿ ನಡೆಸಲಾಯಿತು.ಅನೇಕ ಮಂದಿ ಕವಿಗಳು ಕರುನಾಡು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಿ ಗಮನ ಸೆಳೆದರು.

ಹೆಚ್. ಡಿ. ಕೋಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಎಂ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು.ಮಹಿಳಾ ಉದ್ಯಮಿ ಎನ್.ಜೆ.ಮಂಜುಳಾ, ನಿವೃತ್ತ ಯೋಧ ಮಧುಕುಮಾರ್, ಸಮಾಜ ಸೇವಕ ಎಂ.ಶಿವಪ್ಪ ಹಾಲುಮತ, ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರದ ಎಂ.ಪಿ.ಪ್ರಭು ಸ್ವಾಮಿ ಮತ್ತು ಟ್ರಸ್ಟ್ ನ ಅಧ್ಯಕ್ಷರಾದ ಎಂ.ಅಭಿನಂದನ್ ಮುಖ್ಯ ಅತಥಿಗಳಾಗಿ ಉಪಸ್ಥಿತರಿದ್ದರು. ಶಿಕ್ಷಕರಾದ ಎನ್.ಎಂ. ಜನಿವಾರದ ಅವರು ಈ ಸುಂದರ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾರಂಭದಲ್ಲಿ ಕವಿ ಮೌನೇಶ್ ಅವರು ಸುಶ್ರಾವ್ಯವಾಗಿ ಪ್ರಾರ್ಥನೆ ಮಾಡಿದರು.

Leave a Reply

Your email address will not be published. Required fields are marked *