ದೇಹವನ್ನು ದೇಗುಲದಂತೆ ನೋಡಿಕೊಳ್ಳಿ- ದುಶ್ಚಟಗಳಿಂದ ದೂರವಿರಿ – ಡಾ.ಪಿ.ಶಿವರಾಜು

ನಂದಿನಿ ಮೈಸೂರು

*ದೇಹವನ್ನು ದೇಗುಲದಂತೆ ನೋಡಿಕೊಳ್ಳಿ- ದುಶ್ಚಟಗಳಿಂದ ದೂರವಿರಿ*

– *ಡಾ.ಪಿ.ಶಿವರಾಜು*

ಮೈಸೂರು : ದೇಹ ಎಂಬುದು ದೇಗುಲ ಇದ್ದಂತೆ. ದೇಗುಲವನ್ನು ನೋಡಿದರೆ ಪೂಜ್ಯನೀಯ ಭಾವ ಮೂಡುತ್ತದೆ. ಹೀಗೆಯೆ ನಮ್ಮ ದೇಹವನ್ನು ನೋಡಿಕೊಳ್ಳಬೇಕು. ಆದುದರಿಂದ ಎಲ್ಲಾ ದುಶ್ಚಟಗಳಿಂದ ದೂರವಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಸಲಹೆ ನೀಡಿದರು.

ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾರಾಜ ಪದವಿ ಪೂರ್ವ ಕಾಲೇಜು, ಮೈಸೂರು ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಯಾರಾದರೂ ಏಳಿಗೆ ಕಂಡಿಲ್ಲ ಎಂದರೆ ಅವರು ಯಾವುದಾದರೊಂದು ದುಶ್ಚಟಗಳಿಗೆ ಬಲಿಯಾಗಿರುತ್ತಾರೆ. ಅಂತಹವರಿಗೆ ಸಮಾಜದಲ್ಲಿ ಯಾವುದೇ ರೀತಿಯ ಗೌರವ ಸಿಗುವುದಿಲ್ಲ. ಸಮಾಜದಲ್ಲಿ ನಮಗೆ ಗೌರವ ಸಿಗಬೇಕೆಂದರೆ ಶುಭ್ರವಾಗಿ ಬದುಕಬೇಕು ಹಾಗೂ ದೇಹವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದರು.

ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳು ಯಾವ ಸಾಧನೆಯನ್ನಾದರೂ ಮಾಡುವ ಉತ್ಸಾಹದಲ್ಲಿರುತ್ತಾರೆ. ಹೀಗಾಗಿ ಸಾಧನೆಯ ಕಡೆ ಹೆಚ್ಚಿನ ಗಮನ ನೀಡಬೇಕು. ದುಶ್ಚಟಗಳಿಂದ ದೂರವಿರಬೇಕು. ಟಿ.ವಿ, ಮೊಬೈಲ್ ಗಳಿಗೆ ದಾಸರಾದರೆ ಮನೋರೋಗ ತಜ್ಞರ ಸಹಾಯದಿಂದ ಹೊರಬರಬಹುದು. ಆದರೆ ಸಿಗರೇಟ್, ಗಾಂಜಾದಂತಹ ದುಶ್ಚಟಗಳು ರಕ್ತದಲ್ಲಿ ಬೆರೆತು ಹೋದರೆ ಅದರಿಂದ ಹೊರಬರಲು ಬಹಳ ಕಠಿಣ ಎಂದರು.

ವಿದ್ಯಾರ್ಥಿಗಳು ಚಲನಚಿತ್ರದಲ್ಲಿ ಬರುವ ಹೀರೋಗಳನ್ನು ಅನುಕರಣೆ ಮಾಡಬಾರದು. ಇದರಿಂದ ನಮ್ಮ ದೇಹದ ಮೇಲೆ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ನಮಗೆ ನಾವೇ ಹೀರೋಗಳಾಗಬೇಕು. ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಇಂತಹ ಕಾರ್ಯಕ್ರಮ ಎಲ್ಲಾ ಶಾಲೆಗಳಲಿ ನಡೆಯಬೇಕು. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಪಾಕೆಟ್ ಮನಿ ಸಿಗುತ್ತದೆ. ಇದರಿಂದ ಅವರಿಗೆ ವಿವಿಧ ಆಕರ್ಷೆಣೆಗೆ ಒಳಗಾಗುವ ಹಂತದಲ್ಲಿರುತ್ತಾರೆ. ಈ ವಯಸ್ಸಿನಲ್ಲಿಯೇ ಏನು ಬೇಕಾದರೂ ಕಲಿಯಬಹುದು. ಯಾವ ಸಾಧನೆಯನ್ನಾದರೂ ಮಾಡಬಹುದು ಎಂದರು.

ಮನೋರೋಗ ತಜ್ಞ ಡಾ.ಬಿ.ಎನ್.ರವೀಶ್ ಮಾತನಾಡಿ, ವಿದ್ಯಾಥಿಗಳಲ್ಲಿ ತಾಳ್ಮೆ ಹಾಗೂ ಶ್ರದ್ಧೆ ಕಾಣುತ್ತಿಲ್ಲ. ಇವೆರಡು ಇಲ್ಲ ಎಂದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ.ನಮ್ಮ ಬದುಕಿಗೆ ನಾವೆ ಶಿಲ್ಪಿಗಳಾಗಬೇಕು. ಎಂದಿಗೂ ಕೀಳಿರಮೆ ಇಟ್ಟುಕೊಳ್ಳಬೇಡಿ. ಜೀವನ ಸಂತೋಷದ ಕ್ಷಣಗಳನ್ನು ಅನುಭವಿಸುವುದಕ್ಕೆ ಇರಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಹೋಟೆಲ್ ಊಟದ ಸೇವನೆ ಹೆಚ್ಚಾಗುತ್ತಿದೆ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲೇ ತಯಾರಿಸಿಸ ಊಟವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ನಾಗರಾಜು, ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಶಂಕರ್‌, ತಂಬಾಕು ವಿರೋಧಿ ವೇದಿಕೆ ಸಂಚಾಲಕರಾದ ವಸಂತಕುಮಾರ್ ಮೈಸೂರು ಮಠ್, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ರಮೇಶ್ , ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಗೋವಿಂದ ರಾಜು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *