ನಂದಿನಿ ಮೈಸೂರು
ಫೆ.೮ರಂದು ಚಾಮರಾಜ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ:ನಗರಾಧ್ಯಕ್ಷ ಕೆ.ಎಸ್.ಶಿವರಾಮು
ಮೈಸೂರು:ಕನ್ನಡ ಸಾಹಿತ್ಯ ಪರಿಷತ್ತಿನಿಂದ ಫೆ.೮ರಂದು ಬೆಳಗ್ಗೆ ೮.೩೦ಕ್ಕೆ ನಗರದ ಕಲಾಮಂದಿರದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ನಗರಾಧ್ಯಕ್ಷ ಕೆ.ಎಸ್ ಶಿವರಾಮು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ
ಶಾಸಕ ಕೆ.ಹರೀಶ್ ಗೌಡರವರು ಧ್ವಜಾರೋಹಣ ಮಾಡುವರು. ಬಳಿಕ ಬೆಳಗ್ಗೆ ೯ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಸಮ್ಮೇಳನಾಧ್ಯಕ್ಷ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಚಿದಾನಂದ ಗೌಡ ಅವರ ಮೆರವಣಿಗೆ ಪ್ರಾರಂಭವಾಗಲಿದೆ.
ಬೆಳಗ್ಗೆ ೧೧ಕ್ಕೆ ಕಲಾಮಂದಿರದಲ್ಲಿ ಸಮ್ಮೇಳನದ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಪ್ರೊ.ಕೃಷ್ಣೇಗೌಡ ಉದ್ಘಾಟನೆ ಮಾಡಲಿದ್ದು, ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಕೃತಿ ಬಿಡುಗಡೆ, ಸಮ್ಮೇಳನಾಧ್ಯಕ್ಷರ ಭಾಷಣ ನಡೆಯಲಿದೆ. ಕನ್ನಡಪರ ಹೋರಾಟಗಾರ ಸ.ರ.ಸುದರ್ಶನ್ ಅಧ್ಯಕ್ಷತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ: ಸ್ಥಿತಿಗತಿ ಕುರಿತ ವಿಚಾರಗೋಷ್ಠಿ ಸಾಹಿತಿ ಲತಾ ರಾಜಶೇಖರ್ ಅಧ್ಯಕ್ಷತೆಯಲ್ಲಿ ನಾಡು ನುಡಿಯ ಕುರಿತು ಕವಿಗೋಷ್ಠಿ ನಡೆಯಲಿದೆ. ಕ್ಷೇತ್ರದ ವಿವಿಧ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಂದು ಸಂಜೆ ೫.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಚಿಂತಕ ಕಬ್ಬಿನಾಲೆ ವಸಂತ ಭಾರದ್ವಾಜ್ ಭಾಷಣ ಮಾಡುವರು. ಬಳಿಕ ಐ.ಡಿ.ಲೋಕೇಶ್ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಚಾಮರಾಜ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರಲ್ಲದೇ ಎಲ್ಲರೂ ಕನ್ನಡ ಹಬ್ಬಕ್ಕೆ ಆಗಮಿಸುವಂತೆ ಅಹ್ವಾನಿಸಿದರು.