ನಂದಿನಿ ಮೈಸೂರು
ಅರಮನೆ ಸುರಕ್ಷತೆ ದೃಷ್ಟಿಯಿಂದ ಕುಶಾಲತೋಪು ತಾಲೀಮು ಸ್ಥಳಾಂತರ.ಕರ್ನಾಟಕ ವಸ್ತುಪ್ರದರ್ಶನ ಮೈದಾನದಲ್ಲಿ ಫಿರಂಗಿ ತಾಲೀಮು.
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರೆಗೆ ಆಗಮಿಸಿರುವ ಗಜಪಡೆಗೆ ಎರಡನೇ ಹಂತದ ಕುಶಾಲತೋಪು ತಾಲೀಮು ಅರಮನೆಯ ವಸ್ತುಪ್ರದರ್ಶನ ಆವರಣದಲ್ಲಿ ನಡೆಸಲಾಯಿತು.
ಅರಮನೆ ಹಾಗೂ ಕೋಟೆಗಳು ಪುರಾತನ ಕಟ್ಟಡಗಳಾಗಿರುವುದರಿಂದ ಕುಶಾಲತೋಪು ತಾಲೀಮಿನಿಂದ ಧಕ್ಕೆ ಆಗದಿರಲಿ ಎಂದು ಗಜಪಡೆಯ ಎರಡನೇ ಹಂತದ ಕುಶಾಲತೋಪು ತಾಲೀಮು ವಸ್ತು ಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಲಾಯಿತು.
ಎರಡನೇ ಹಂತದ ಕುಶಾಲತೋಪು ತಾಲೀಮು
ಮೊದಲ ಬಾರಿಗೆ ಕುಶಾಲತೋಪು ತಾಲೀಮನ್ನು ಅರಮನೆ ಆವರಣದ ಪಕ್ಕದ ಕೋಟೆ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಆಯೋಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೂರು ಸುತ್ತಿನ 21 ಕುಶಾಲತೋಪುಗಳನ್ನು ಹಾರಿಸಲಾಗಿತ್ತು. ಆದರೇ, ಕುಶಾಲತೋಪಿನ ಶಬ್ಧಕ್ಕೆ ಪುರಾತನ ಅರಮನೆ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿಯ ಸೂಚನೆ ಮೇರೆಗೆ ಎರಡನೇ ತಾಲೀಮನ್ನು ವಸ್ತು ಪ್ರದರ್ಶನದ ಪಾರ್ಕಿಂಗ್ ಆವರಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.
ಬೆದರಿದ ಆನೆ, ಕುದುರೆಗಳು: ಎರಡನೇ ಹಂತದ ಕುಶಾಲತೋಪು ತಾಲೀಮಿನಲ್ಲಿ 12 ಆನೆಗಳು ಭಾಗವಹಿಸಿದ್ದವು. ಅದರಲ್ಲಿ ಪಾರ್ಥಸಾರಥಿ ಸ್ವಲ್ಪ ಬೆದರಿದಂತೆ ಕಂಡು ಬಂತು. ಜೊತೆಗೆ ಉಳಿದ 11 ಆನೆಗಳು ಬೆದರದೇ ನಿಂತಿದ್ದವು. ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಕೆಲವು ಆನೆಗಳು ಶಬ್ದ ಮಾಡಿದವು. 7 ಫಿರಂಗಿ ಗಾಡಿಗಳಲ್ಲಿ 3 ಸುತ್ತಿನಲ್ಲಿ 21 ಕುಶಾಲತೋಪುಗಳನ್ನು ಸಿಡಿಸಲಾಗಿದ್ದು, ಇದರಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಶಿವರಾಜ್ ಕುಶಾಲತೋಪು ತಾಲೀಮಿನ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಎರಡನೇ ತಾಲೀಮಿನಲ್ಲಿ 12 ಆನೆಗಳು ಹಾಗೂ 41 ಅಶ್ವಾರೋಹಿ ದಳದ ಕುದುರೆಗಳು ಭಾಗವಹಿಸಿದ್ದವು.
ಕುಶಾಲತೋಪು ಸಿಡಿಸಿದಾಗ ಸುಮಾರು ಸರಾಸರಿ 92.2 ಡೆಸಿಬಲ್ ಶಬ್ದ ಹೊರ ಹೊಮ್ಮಿದೆ. ಮೈಸೂರು ಅರಮನೆಯ ಆಡಳಿತ ಮಂಡಳಿಯ ಸೂಚನೆ ಮೇರೆಗೆ ಎರಡನೇ ಹಂತದ ತಾಲೀಮನ್ನು ವಸ್ತು ಪ್ರದರ್ಶನ ಆವರಣದಲ್ಲಿ ನಡೆಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಜಂಬೂಸವಾರಿಯ ಮೆರವಣಿಗೆ ದಿನ 21 ಕುಶಾಲತೋಪುಗಳನ್ನು ಅರಮನೆಯ ಆವರಣದ ಪಕ್ಕದಲ್ಲಿರುವ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಸಿಡಿಸಲಾಗುವುದು ಎಂದು ತಿಳಿಸಿದರು.