ಮೇಯರ್‌ಗೆ ಕುದುರೆ ಸವಾರಿ ತರಬೇತಿ ಹೇಗಿದೆ ಗೊತ್ತಾ?ಚಿಕ್ಕವನಾಗಿದ್ದಾಗ ಕುದುರೆ ನೋಡ್ತಿದ್ದೇ ಈಗ ಸವಾರಿ ಮಾಡುವ ಅವಕಾಶ ಸಿಕ್ಕಿದೆ:ಮೇಯರ್ ಶಿವಕುಮಾರ್

ನಂದಿನಿ ಮೈಸೂರು

 

ಮೇಯರ್‌ಗೆ ಕುದುರೆ ಸವಾರಿ ತರಬೇತಿ ಹೇಗಿದೆ ಗೊತ್ತಾ?

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ನೂತನ ಮೇಯರ್ ಶಿವಕುಮಾರ್ ಅವರಿಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹಾರ್ಸ್ ಪಾರ್ಕ್‌ನಲ್ಲಿ ಕುದುರೆ ಸವಾರಿ ತರಬೇತಿ ಆರಂಭವಾಯಿತು .

ಅಶ್ವಾರೋಹಿದಳದ ಪೊಲೀಸರು ಮೇಯರ್ ಶಿವಕುಮಾರ್ ಅವರನ್ನು ಕುದುರೆ ಮೇಲೆ ಕೂರಿಸಿ ಸವಾರಿ ಮಾಡುವುದನ್ನು ಹೇಳಿಕೊಟ್ಟರು .

ಟೀಶರ್ಟ್ , ಟ್ರ್ಯಾಕ್ ಪ್ಯಾಂಟ್ , ಶೂ ಹಾಗೂ ಹೆಲೆಟ್ ಧರಿಸಿದ್ದ ಶಿವಕುಮಾರ್‌ಗೆ ತರಬೇತಿಯ ಮೊದಲ ದಿನದಂದು ಕುದುರೆ ಏರುವುದು , ಲಗಾಮು ಹಿಡಿಯುವುದು , ಸವಾರಿ ವೇಳೆ ಎಚ್ಚರ ವಹಿಸುವುದು , ಇಳಿಯುವಾಗ ಅನುಸರಿಸಬೇಕಾದ ಕ್ರಮ ಮೊದಲಾದವುಗಳನ್ನು ಮೌಂಟೆಡ್ ಕಂಪನಿ ಸಿಬ್ಬಂದಿ ತಿಳಿಸಿಕೊಟ್ಟರು .

ಪ್ರಾರಂಭದ ಮೊದಲು ಕುದುರೆಯ ಸಾಮರ್ಥ್ಯ , ದೈಹಿಕ ಮತ್ತು ಮಾನಸಿಕ ಲಕ್ಷಣಗಳು , ಸ್ವಭಾವ , ಗಾತ್ರ , ಎತ್ತರ , ಆಹಾರ ಪದ್ಧತಿ ಕುರಿತಂತೆ ಮಾಹಿತಿ ನೀಡಿದ ಪೊಲೀಸರು ಹೊಸಬರ ಬಗ್ಗೆ ಅದರ ಪ್ರತಿಕ್ರಿಯೆ , ಯಾವ ಸಂದರ್ಭದಲ್ಲಿ ಅದು ಉಗ್ರರೂಪ ತಾಳಬಹುದು ಎಂಬುದರ ಕುರಿತು ಮೌಂಟೆಡ್ ಕಂಪನಿ ತರಬೇತುದಾರ ಶ್ರೀನಿವಾಸ್ , ಲೋಕೇಶ್ , ಆನಂದ್ ಸಿಂಗ್ ಅವರು ವಿವರಿಸಿದರು.

ಆರಂಭದಲ್ಲಿ ಮೇಯರ್ ಏರಿದ ಕುದುರೆಯನ್ನು ಓರ್ವ ಸಿಬ್ಬಂದಿ ಹಿಡಿದು ಮೈದಾನದಲ್ಲಿ ಮೂರ್ನಾಲ್ಕು ಸುತ್ತು ನಿಧಾನವಾಗಿ ನಡೆಸಿದರು . ಅದರ ಎಡ ಮತ್ತು ಬಲ ಭಾಗದಲ್ಲಿ ಇಬ್ಬರು ಪೊಲೀಸರು ಕುದುರೆ ಸವಾರಿ ಮಾಡಿದರು . ಬೆಳಗ್ಗೆ 6 ರಿಂದ 7.30 ರವರೆಗೆ ಮೇಯರ್‌ಗೆ ಕುದುರೆ ಸವಾರಿ ಕುರಿತು ತರಬೇತಿ ನೀಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್‌ , ಮಹಾಪೌರರಾಗಿ ಆಯ್ಕೆಯಾಗುತ್ತಿದ್ದಂತೆಯೇ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಗಣ್ಯರೊಂದಿಗೆ ಪುಷ್ಪಾರ್ಚನೆ ಮಾಡುವ ಹಾಗೂ ಲಕ್ಷಾಂತರ ಜನರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುವ ಅವಕಾಶ ದೊರೆತಿರುವುದು ನನ್ನ ಪೂರ್ವಜನ್ಮದ ಪುಣ್ಯವಾಗಿದೆ ಎಂದರು .ದಸರೆ ಸಮೀಪಿಸುತ್ತಿದೆ. ಕುದುರೆ ಸವಾರಿ ತರಬೇತಿ ಪಡೆಯಲು ಸೋಮವಾರದಿಂದ ಶುರು ಮಾಡಿದ್ದೇನೆ . ಮೊದಲು ಕುದುರೆ ಮುಖವನ್ನು ಸ್ಪರ್ಶಿಸಿದಾಗ ಭಯವಾಯಿತು . ಕುದುರೆ ಮೇಲೆ ಒಂದೆರಡು ಸುತ್ತು ತರಬೇತುದಾರರೊಂದಿಗೆ ಸವಾರಿ ಮಾಡಿದ ಬಳಿಕ ನಿಯಂತ್ರಣ ಬಂದಿತು . ಇನ್ನೆರಡು ದಿನಗಳಲ್ಲಿ ಆತ್ಮವಿಶ್ವಾಸ ಬರಲಿದೆ . ನಂತರ ನಾನೊಬ್ಬನೇ ಸವಾರಿ ಮಾಡುತ್ತೇನೆ.ನಾನು ಚಿಕ್ಕವನಿದ್ದಾಗ ಸುಣ್ಣದ ಕೇರಿಯಲ್ಲಿ ಕುದುರೆ ಸವಾರಿ ನೋಡ್ತೀದ್ದೇ.ಈಗ ನಾನೇ ಕುದುರೆ ಸವಾರಿ ಮಾಡುವ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

 

Leave a Reply

Your email address will not be published. Required fields are marked *