ಪಿರಿಯಾಪಟ್ಟಣ:14 ಆಗಸ್ಟ್ 2022
ನಂದಿನಿ ಮೈಸೂರು
ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನತೆ ಪೂರಕವಾಗಿ ಸ್ಪಂದಿಸಿ ದೇಶಪ್ರೇಮ ಮೆರೆದಿದ್ದಾರೆ ಎಂದು ಬಿಜೆಪಿ ಮುಖಂಡ ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಬೆಕ್ಕರೆ ಗ್ರಾಮದ ಮುಖಂಡರಾದ ಕೆ.ಎಸ್ ಷಣ್ಮುಖಾರಾಧ್ಯ ಅವರಿಗೆ ಹರ್ ಘರ್ ತಿರಂಗ ಕಾರ್ಯಕ್ರಮ ಅಂಗವಾಗಿ ರಾಷ್ಟ್ರಧ್ವಜ ವಿತರಿಸಿ ಅವರು ಮಾತನಾಡಿದರು, ಬ್ರಿಟಿಷರ ದಬ್ಬಾಳಿಕೆಯ ಆಳ್ವಿಕೆಯಲ್ಲಿದ್ದ ನಮ್ಮ ದೇಶ ಸ್ವತಂತ್ರವಾಗಲು ಹಲವು ಮಹನೀಯರ ತ್ಯಾಗ ಬಲಿದಾನ ಕಾರಣವಾಗಿದೆ, ಕ್ರಾಂತಿಕಾರಿ ಹಾಗೂ ಶಾಂತಿಯುತ ಹೋರಾಟದಿಂದ ಸ್ವಾತಂತ್ರ್ಯ ಪಡೆದ ನಾವು ಈ ಬಾರಿ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗು ಹೆಮ್ಮೆಯ ವಿಚಾರವಾಗಿದೆ ಎಂದರು.
ಮುಖಂಡರಾದ ಕೆ.ಎಸ್ ಷಣ್ಮುಖಾರಾಧ್ಯ ಅವರು ಮಾತನಾಡಿ ನಾವೆಲ್ಲರೂ ಇಂದು ಸರಿ ಸಮಾನ ಹಕ್ಕು ಪಡೆದು ಜೀವನ ನಡೆಸಲು ಸಂವಿಧಾನ ಮುಖ್ಯ ಕಾರಣವಾಗಿದ್ದು ದೇಶದ ಸಂವಿಧಾನ, ರಾಷ್ಟ್ರಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.
ಈ ವೇಳೆ ಬೆಕ್ಕರೆ ಸರ್ಕಾರಿ ಶಾಲಾ ಮಕ್ಕಳಿಗೆ ಸ್ವಾತಂತ್ರ್ಯ ದಿನದ ಶುಭಕೋರಿ ಸಿಹಿ ವಿತರಿಸಲಾಯಿತು, ಕೆಡಿಪಿ ಸದಸ್ಯ ಜವರಪ್ಪ, ನಾಗೇಂದ್ರ ಆರಾಧ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸೋಮಣ್ಣ ಇದ್ದರು.