ಮೈಸೂರು:10 ಮೇ 2022
ನಂದಿನಿ ಮೈಸೂರು
ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಅಂಗ ಸಂಸ್ಥೆಯಾದ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರ ದಿನಾಚರಣೆ ಸಮಾರಂಭವನ್ನು ಮೇ ೧೨ರಂದು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡ ತಿಳಿಸಿದರು.
ಅಂದು ಸಂಜೆ ೪.೩೦ಕ್ಕೆ ವಿದ್ಯಾಲಯದ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ವಹಿಸುವರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ್ಮಠ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಹಾಲಿ ಶೈಕ್ಷಣಿಕ ವಿಷಯ ಅಭಿವೃದ್ಧಿ ಮತ್ತು ಮೌಲ್ಯ ಗುಣಮಟ್ಟ ಮಾಪಸ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಕುಮಾರ್, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರಿಂಧರ್ ಸಿಂಗ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಪ್ರಸ್ತುತ ವರ್ಷದ ೧೫೦ ಪದವೀಧರರು ಪದವಿ ಪ್ರಮಾಣ ಪತ್ರ ಸ್ವೀಕರಿಸಲಿದ್ದು, ೧೦ ವಿದ್ಯಾರ್ಥಿಗಳು ೯ ಚಿನ್ನದ ಪದಕಗಳನ್ನು ಮತ್ತು ೧೫ ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ೪ ಚಿನ್ನದ ಪದಕಗಳು ಮತ್ತು ೫ ನಗದು ಬಹುಮಾನಗಳನ್ನು ಪಡೆಯುವ ಮೂಲಕ ಡಾ.ಆರ್.ಶ್ರೇಯಾನ್ಸ್ ಡರ್ಲಾ ಈ ಬಾರಿಯ ಅತ್ಯುನ್ನತ ಪದಕ ಮತ್ತು ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದರು.
೨೦೦೮ರಲ್ಲಿ ಸ್ಥಾಪಿತವಾದ ಜೆಎಸ್ಎಸ್ ವಿಶ್ವವಿದ್ಯಾನಿಲಯ ಪ್ರಸ್ತುತ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಾಗಿದ್ದು, ಸಂಸ್ಥೆಯ ಕಳೆದ ಹದಿನಾಲ್ಕು ವರ್ಷಗಳಲ್ಲಿ ಅಸಾಧರಣ ಪ್ರಗತಿ ಸಾಧಿಸಿ ವೈದ್ಯಕೀಯ, ದಂತ ವೈದ್ಯಕೀಯ, ಔಷಧ ಶಾಸ್ತ್ರ ಹಾಗೂ ಜೀವ ವೈದ್ಯಕೀಯ ವಿಜ್ಞಾನ, ಜೀವ ವಿಜ್ಞಾನ, ಆರೋಗ್ಯ ವಿಜ್ಞಾನ, ಆರೋಗ್ಯ ವ್ಯವಸ್ಥೆ ನಿರ್ವಹಣೆ ವಿಷಯದಲ್ಲೂ ಉತ್ತಮ ಗುಣಮಟ್ಟದ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಶಿಕ್ಷಣ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ.
ನ್ಯಾಕ್ನ ‘ಎ’ ಪ್ಲಸ್ ಮ್ಯಾನತೆ ಗಳಿಸಿದ್ದು, ಎನ್ಐಆರ್ಎಫ್ ೨೦೨೧ರಲ್ಲಿ ೩೪ನೇ ಶ್ರೇಯಾಂಕ ಮತ್ತು ಟೈಮ್ ಉನ್ನತ ಶಿಕ್ಷಣ ಮಾಪನದಲ್ಲೂ ವಿಶ್ವದಲ್ಲಿ (೨೦೨೨) ೩೫೧-೪೦೦ ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ನಿರ್ದೇಶಕ ಕುಶಲಪ್ಪ, , ಕುಲಸಚಿವ ಬಿ.ಮಂಜುನಾಥ್, ಜೆಎಸ್ಎಸ್ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ದಯಾನಂದ, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಎಂ.ಎನ್.ಸುಮಾ, ಆಡಳಿತಾಧಿಕಾರಿ ಎಸ್.ಆರ್.ಸತೀಶ್ ಚಂದ್ರ ಹಾಜರಿದ್ದರು.