ನಂದಿನಿ ಮೈಸೂರು
ಪಿಎಸ್ಐ ನೇಮಕಾತಿಯ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕಿ ಮನೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಈ ಬೃಹತ್ ಭ್ರಷ್ಟಾಚಾರದ ತೀವ್ರ ತನಿಖೆ ನಡೆದು ಎಲ್ಲ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಶಾಮೀಲಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಬೇಕು’ ಎಂದು ಒತ್ತಾಯಿಸಿದರು.
‘545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ. ನೇಮಕಾತಿಯ ಸಂದರ್ಭದಲ್ಲಿ ₹ 80 ಲಕ್ಷದಷ್ಟು ಲಂಚವನ್ನು ಪ್ರತಿ ಅಭ್ಯರ್ಥಿಯಿಂದ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬರುತಿದೆ. 545 ಹುದ್ದೆಗಳ ಪೈಕಿ 300ರಷ್ಟು ಹುದ್ದೆಗಳು ಅಕ್ರಮವಾಗಿ ನಡೆದಿವೆ ಎಂಬ ಆರೋಪವಿದೆ. ಈ ಅಕ್ರಮ ದಂಧೆಯು ಗೋಕುಲನಗರ ಜಿಡಿಎ ಲೇಔಟ್ನ ಜ್ಞಾನಜ್ಯೋತಿ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ಮಾಡಲಾಗಿದೆ ಎಂಬ ದೃಢವಾದ ಆಧಾರದಿಂದ ಸಿಐಡಿ ತಂಡವು ಬಿಜೆಪಿಯ ಮಹಿಳಾ ನಾಯಕಿ ಮನೆ ಮೇಲೆ ದಾಳಿ ನಡೆಸಿ ತನಿಖೆ ಮಾಡುತ್ತಿದೆ. ಬಿಜೆಪಿಯು ತನ್ನದೇ ತಳಹಂತದ ಸದಸ್ಯರ ಮೂಲಕ ಇಂತಹ ಅಕ್ರಮಗಳನ್ನು ನಡೆಸಿ ಹಣ ವಸೂಲಿಗೆ ಇಳಿದಿರುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಕಂಡು ಬರುತ್ತಿವೆ’ ಎಂದು ಆರೋಪಿಸಿದ್ದಾರೆ.
‘ಗೃಹಸಚಿವರು ಬಿಜೆಪಿ ಮಹಿಳಾ ನಾಯಕಿಯ ಮನೆಗೆ ಹೋಗಿ ಆರತಿ ಬೆಳಗಿಸಿಕೊಂಡು ಬಂದು ಈಗ ಭ್ರಷ್ಟಾಚಾರ ಮತ್ತು ಅಕ್ರಮ ದಂಧೆ ಬಯಲಿಗೆ ಬರುತ್ತಿದ್ದಂತೆ ಅವರು ಯಾರೋ ತನಗೆ ಗೊತ್ತಿಲ್ಲ ಎಂಬ ಸುಳ್ಳು ಹೇಳುತ್ತಿದ್ದಾರೆ. ಇದು ಅವರ ಪಕ್ಷದ ಸುಳ್ಳು ಸಂಸ್ಕೃತಿಯ ಮುಂದುವರಿಕೆಯೇ ಆಗಿದೆ’ ಎಂದು ಟೀಕಿಸಿದ್ದಾರೆ.
-ಎನ್ ಎಂ ನವೀನ್ ಕುಮಾರ್
ಕಾಂಗ್ರೆಸ್ ಮುಖಂಡರು