ನಂದಿನಿ ಮನುಪ್ರಸಾದ್ ನಾಯಕ್
ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರ್ಪಡೆ ತಡೆಗೆ ಆಗ್ರಹ
– ತಿ.ನರಸೀಪುರ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ
– ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸಮಾನ ಮನಸ್ಕರ ವೇದಿಕೆ ಒತ್ತಾಯ
ಮೈಸೂರು:
ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ (ಪೊಲೀಸ್ ಬಡಾವಣೆ) ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ, ಐತಿಹಾಸಿಕ ತಿಪ್ಪಯ್ಯನ ಕೆರೆಗೆ ಕಲುಷಿತ ಒಳಚರಂಡಿ ನೀರು ಸೇರುವುದನ್ನು ತಡೆದು ಕೆರೆಯನ್ನು ಸಂರಕ್ಷಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟಿಸಿದರು.

ಬಡಾವಣೆಯ ಮುಖ್ಯ ದ್ವಾರದ ಬಳಿ ಪ್ರತಿಭಟನೆಗೆ ಕುಳಿತ ನೂರಾರು ಮಂದಿ ನಿವಾಸಿಗಳು ಒಂದು ಹಂತದಲ್ಲಿ ರಸ್ತೆ ತಡೆ ಮಾಡಿ ವಾಹನ ಸಂಚಾರ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕೆಲ ನಿಮಿಷಗಳ ಕಾಲ ಆ ಮಾರ್ಗದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಕರ್ನಾಟಕ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ನಿರ್ಮಾಣಗೊಂಡಿರುವ ಈ ಬಡಾವಣೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡಿದ್ದು, ಒಟ್ಟು 1,954 ನಿವೇಶನಗಳನ್ನು ಹೊಂದಿದೆ. ಪ್ರಸ್ತುತ ಸುಮಾರು 1,400 ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ನಾಗರಿಕರು ವಾಸಿಸುತ್ತಿದ್ದಾರೆ. ಬಡಾವಣೆ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಅಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ನಾಗರಿಕರು ನಿಯಮಾನುಸಾರ ತೆರಿಗೆ ಸೇರಿದಂತೆ ವಿವಿಧ ಶುಲ್ಕಗಳನ್ನು ಪಾವತಿಸುತ್ತಿದ್ದರೂ, ಈವರೆಗೆ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಡಾವಣೆಯಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು ಹಾಗೂ ತಿಪ್ಪಯ್ಯನ ಕೆರೆಯ ಮಾಲಿನ್ಯ ತೀವ್ರ ಸಮಸ್ಯೆಗಳಾಗಿವೆ. ಕೊಳವೆಬಾವಿ ಮೂಲಕ ಸರಬರಾಜಾಗುತ್ತಿರುವ ನೀರು ಅತ್ಯಂತ ಕ್ಷಾರಯುಕ್ತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ನಿವಾಸಿಗಳು ಸಮೀಪದ ಐ.ಪಿ.ಎಸ್. ಬಡಾವಣೆ (3ನೇ ಹಂತ) ಮತ್ತು ಜೆಎಸ್ಎಸ್ (2ನೇ ಹಂತ) ಬಡಾವಣೆಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ನಿರ್ಮಿಸಲಾದ ಎಲ್ಲಾ ರಸ್ತೆಗಳು ಪ್ರಸ್ತುತ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಗಳಿಂದಾಗಿ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಿರಿಯ ನಾಗರಿಕರು ಹಾಗೂ ಮಕ್ಕಳು ರಸ್ತೆಗಳಲ್ಲಿ ಕಾಲುಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳೂ ಸಾಕಷ್ಟು ನಡೆದಿವೆ. ಶಾಸಕರಿಂದ ನಿರ್ಮಿಸಲಾದ ಮುಖ್ಯ ರಸ್ತೆಯನ್ನು ಹೊರತುಪಡಿಸಿ, ಆಂತರಿಕ ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ ಎಂದು ದೂರಿದರು.
ಬಡಾವಣೆಗೆ ಹೊಂದಿಕೊಂಡಿರುವ ಐತಿಹಾಸಿಕ ತಿಪ್ಪಯ್ಯನ ಕೆರೆಗೆ ಅಕ್ಕಪಕ್ಕದ ಬಡಾವಣೆಗಳ ಒಳಚರಂಡಿ ಕಲುಷಿತ ನೀರು ಸೇರುತ್ತಿರುವುದರಿಂದ ಕೆರೆ ತೀವ್ರ ಮಾಲಿನ್ಯಕ್ಕೊಳಗಾಗಿದೆ. ಹಿಂದೆ ಆಟೋಮೋಟಿವ್ ಎಕ್ಸೆಲ್ ಕಂಪನಿಯ ಸಿಎಸ್ಆರ್ ನಿಧಿ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕೆರೆಯನ್ನು ಪುನಶ್ಚೇತನಗೊಳಿಸಲಾಗಿತ್ತು. ಕೆರೆ ನೀರಿನಿಂದ ತುಂಬಿ ವಿದೇಶಿ ಹಕ್ಕಿಗಳ ಆವಾಸಸ್ಥಾನವಾಗಿದ್ದ ಸಂದರ್ಭದಲ್ಲಿ ಮೈಸೂರು ಮೃಗಾಲಯ ಪ್ರಾಧಿಕಾರದ ಉಸ್ತುವಾರಿಯಲ್ಲಿತ್ತು. ಆದರೆ, ಇದೀಗ ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ಪರಿಸರ ಹಾಗೂ ಸೌಂದರ್ಯ ಹದಗೆಟ್ಟಿದ್ದು, ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದರು.
ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ, ಆಂತರಿಕ ರಸ್ತೆಗಳ ತುರ್ತು ದುರಸ್ತಿ ಹಾಗೂ ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರುವುದನ್ನು ತಡೆದು ಕೆರೆಯ ಪುನಶ್ಚೇತನ ಮತ್ತು ಸಂರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಡಾವಣೆಯ ಸಾವಿರಾರು ನಾಗರಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ವಿಷಯವನ್ನು ತುರ್ತಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಶಿವಸ್ವಾಮಿ, ಅಶೋಕ್, ಮನುಕುಮಾರ್, ಮೋಹನ್ ರಾವ್, ಲೋಹಿತ್, ಮಹೇಶ್, ಸ್ವಾಮಿ, ಶಿವರಾಮ್, ಗಗನ್, ಲೀಲಾ ಶಿವಕುಮಾರ್, ಶೋಭಾ ಧನಂಜಯ, ಮೋಹನ್ ಕುಮಾರ್, ಸಿದ್ದರಾಜೇಗೌಡ, ವೀಣಾ ಕಾಮತ್, ವೆಂಕಟೇಶ್, ಶಿವಣ್ಣ, ಎನ್.ಎಂ. ಮಾನೆ, ದೇವಪ್ಪ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.