ಗಾಡ್ ಗಣಪನೂ ಗವರ್ನಮೆಂಟ್ ರೂಲ್ಸ್ ಪಾಲಿಸಬೇಕು,ಪಾಲಿಸದಿದ್ರೆ ಮೈಸೂರು ನಗರ ಪಾಲಿಕೆಯವರು ಎತ್ತಿಕೊಂಡು ಹೋಗ್ತಾರೆ ಅಷ್ಟೇ

ವಿಶೇಷ ವರದಿ:
ನಂದಿನಿ ಮನುಪ್ರಸಾದ್ ನಾಯಕ್

ಹಿಂದೂಗಳ ಪ್ರೀಯಾವಾದ ಹಬ್ಬ ಗೌರಿ ಗಣೇಶ ಹಬ್ಬ.ಈ ಹಬ್ಬಕ್ಕೆ ಊರು ಊರು,ಕೇರಿ ಕೇರಿ, ಗಲ್ಲಿ ಗಲ್ಲಿಗೂ
ಗೌರಿ ಗಣೇಶ ಕೂರಿಸಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾರೆ.ಬೇರೆಯವರಿಗಿಂತ ಎತ್ತರದ ಗಣಪತಿ ,
ಕಲರ್ ಕಲರ್ ಗಣಪತಿ, ಕೂರಿಸುವವರು ತಮಗಿಷ್ಟ ಬಂದಂಗೆ ಕೂರಿಸುವಂತಿಲ್ಲ.


*ಗಾಡ್ ಗಣಪನೂ ಗವರ್ನಮೆಂಟ್ ರೂಲ್ಸ್ ಪಾಲಿಸಬೇಕು,ಪಾಲಿಸದಿದ್ರೆ ಮೈಸೂರು ನಗರ ಪಾಲಿಕೆಯವರು ಎತ್ತಿಕೊಂಡು ಹೋಗ್ತಾರೆ ಅಷ್ಟೇ* ಯಾಕೇ ಅಂತೀರಾ ಈ ವರದಿ ಓದಿ.

ಪರಿಸರ ಸ್ನೇಹಿ ಗೌರಿ–ಗಣೇಶ ಹಬ್ಬ ಆಚರಣೆ ಕುರಿತು
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನಗಳನ್ವಯ, 2026ನೇ ಸಾಲಿನ ಗೌರಿ–ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು, ಗಣೇಶ ಮೂರ್ತಿ ತಯಾರಕರು, ಮಾರಾಟಗಾರರು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.

1. ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಹಾಗೂ ಇತರೆ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗೌರಿ–ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಣಿಕೆ, ಪ್ರದರ್ಶನ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

2. ವಿಷಕಾರಿ, ರಾಸಾಯನಿಕ, ಲೋಹಯುಕ್ತ ಹಾಗೂ ಕೃತಕ ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಅವಕಾಶವಿರುವುದಿಲ್ಲ.

3. ನೈಸರ್ಗಿಕ ಮಣ್ಣು/ಜೇಡಿ ಮಣ್ಣು ಹಾಗೂ ಪರಿಸರ ಸ್ನೇಹಿ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗೌರಿ–ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಲು, ಮಾರಾಟ ಮಾಡಲು ಮತ್ತು ಪೂಜಿಸಲು ಅವಕಾಶವಿರುತ್ತದೆ.

4. POP ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಕೆರೆ, ನದಿ, ಕಾಲುವೆ, ಬಾವಿ ಅಥವಾ ಇತರೆ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

5. ಗೌರಿ–ಗಣೇಶ ಮೂರ್ತಿಗಳನ್ನು ಮೈಸೂರು ಮಹಾನಗರ ಪಾಲಿಕೆಯಿಂದ ಗುರುತಿಸಲಾಗುವ ನಿಗದಿತ ವಿಸರ್ಜನಾ ಸ್ಥಳಗಳು ಅಥವಾ ತಾತ್ಕಾಲಿಕ ವಿಸರ್ಜನಾ ತೊಟ್ಟಿಗಳಲ್ಲಿ ಮಾತ್ರ ವಿಸರ್ಜಿಸಬೇಕು. ಸದರಿ ಸ್ಥಳಗಳ ವಿವರಗಳನ್ನು ಪ್ರತ್ಯೇಕವಾಗಿ ಸಾರ್ವಜನಿಕರಿಗೆ ತಿಳಿಸಲಾಗುವುದು.

6. ಮೂರ್ತಿ ವಿಸರ್ಜನೆಗೂ ಮೊದಲು ಹೂವು, ಹಾರ, ಬಟ್ಟೆ, ಅಲಂಕಾರಿಕ ಸಾಮಗ್ರಿ, ಪ್ಲಾಸ್ಟಿಕ್ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಪ್ರತ್ಯೇಕಿಸಬೇಕು. ಯಾವುದೇ ಪೂಜಾ ಸಾಮಗ್ರಿಯನ್ನು ಜಲಮೂಲಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು.

7. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಅನುಮತಿಗಳನ್ನು ಪಡೆದು, ವಿಧಿಸಲಾಗುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

8. ಹಬ್ಬದ ಆಚರಣೆಯಲ್ಲಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಕಪ್‌ಗಳು, ತಟ್ಟೆಗಳು, ಚಮಚಗಳು, ಸ್ಟ್ರಾಗಳು, ಥರ್ಮೋಕೋಲ್ ಅಲಂಕಾರಿಕ ವಸ್ತುಗಳು ಹಾಗೂ ಇತರೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಬಾರದು.

9. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಪೂಜಾ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗೆ ಹಸ್ತಾಂತರಿಸಬೇಕು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಗಣೇಶ ಮೂರ್ತಿ ತಯಾರಕರು, ದಾಸ್ತಾನುದಾರರು ಮತ್ತು ಮಾರಾಟಗಾರರು ಮೇಲ್ಕಂಡ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. POP ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ನಿಷೇಧಿತ ಮೂರ್ತಿಗಳ ತಯಾರಿಕೆ, ದಾಸ್ತಾನು ಅಥವಾ ಮಾರಾಟವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಈ ಮೂಲಕ ಸೂಚಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡಗಳಿಂದ ನಗರದ ಮೂರ್ತಿ ತಯಾರಿಕಾ ಘಟಕಗಳು, ಗೋದಾಮುಗಳು, ಮಾರಾಟ ಮಳಿಗೆಗಳು ಮತ್ತು ತಾತ್ಕಾಲಿಕ ಮಾರಾಟ ಸ್ಥಳಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಗುವುದು.
ತಪಾಸಣೆಯ ಸಂದರ್ಭದಲ್ಲಿ ನಿಷೇಧಿತ POP ಅಥವಾ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಣಿಕೆ ಅಥವಾ ಮಾರಾಟ ಕಂಡುಬಂದಲ್ಲಿ, ಸಂಬಂಧಪಟ್ಟ ಮೂರ್ತಿಗಳು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡು ನಿಯಮಾನುಸಾರ ದಂಡ ವಿಧಿಸಲಾಗುವುದು. ಅಲ್ಲದೆ, ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ, 1974, ಪರಿಸರ (ಸಂರಕ್ಷಣಾ) ಕಾಯ್ದೆ, 1986 ಹಾಗೂ ಅನ್ವಯವಾಗುವ ಇತರೆ ಕಾಯ್ದೆ ಮತ್ತು ನಿಯಮಗಳಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಖರೀದಿಸಿ, ಮೈಸೂರಿನ ಕೆರೆಗಳು ಮತ್ತು ಜಲಮೂಲಗಳ ಸಂರಕ್ಷಣೆಗೆ ಸಹಕರಿಸುವುದರೊಂದಿಗೆ ಗೌರಿ–ಗಣೇಶ ಹಬ್ಬವನ್ನು ಸ್ವಚ್ಛ, ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಕೋರಿದ್ದಾರೆ.
“ಮಣ್ಣಿನ ಗಣಪನನ್ನು ಪೂಜಿಸೋಣ – ಜಲಮೂಲ ಮತ್ತು ಪರಿಸರವನ್ನು ಸಂರಕ್ಷಿಸೋಣ.”

Leave a Reply

Your email address will not be published. Required fields are marked *