ನಂದಿನಿ ಉತ್ಪನ್ನಗಳನ್ನು ಬಳಸಿ ರೈತರನ್ನು ಬೆಳೆಸಿ: ಮೈಮುಲ್ ಅಧ್ಯಕ್ಷ ಕೆ.ಈರೇಗೌಡ

ನಂದಿನಿ ಮನುಪ್ರಸಾದ್ ನಾಯಕ್

 

ನಂದಿನಿ ಉತ್ಪನ್ನಗಳನ್ನು ಬಳಸಿ ರೈತರನ್ನು ಬೆಳೆಸಿ: ಮೈಮುಲ್ ಅಧ್ಯಕ್ಷ ಕೆ.ಈರೇಗೌಡ

ಮೈಸೂರು: ನಂದಿನಿ ಉತ್ಪನ್ನಗಳನ್ನು ಹೋಟೆಲ್ ಮಾಲೀಕರು ಬಳಸುವ ಮೂಲಕ ರೈತರ ಹೈನೋದ್ಯಮವನ್ನು ಪ್ರೋತ್ಸಾಹಿಸಿ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಈರೇಗೌಡ ತಿಳಿಸಿದರು.
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಡಾ.ವರ್ಗೀಸ್ ಕುರಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ಹೋಟೆಲ್ ಮಾಲೀಕರ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನಕಲಿ ಹಾಲು, ತುಪ್ಪ ಹಾಗೂ ಪನ್ನೀರಿನ ಬಳಕೆ ನಡೆಯುತ್ತಿದೆ. ಹೋಟೆಲ್ ಉದ್ಯಮದವರು ಉತ್ತಮ ಗುಣಮಟ್ಟದ ಹಾಲಿನ ಖರೀದಿಗೆ ಆದ್ಯತೆ ನೀಡಬೇಕಿದೆ. ನಮ್ಮದು ರೈತರಿಂದ ನೇರವಾಗಿ ವೈಜ್ಞಾನಿಕವಾಗಿ ಪರೀಕ್ಷಿಸಿ ಪಡೆದು ನೇರವಾಗಿ ಮಾರಾಟ ಮಾಡಲಾಗುತ್ತಿದೆ. ಇಂದು ಹೊರ ರಾಜ್ಯದಿಂದ ಬರುತ್ತಿರುವ ಕೋವಾ, ಪನ್ನೀರ್, ಹಾಲು, ಮಜ್ಜಿಗೆ ನಕಲಿಗಳಾಗಿವೆ. ಆದರೆ, ನಂದಿನಿ ನಕಲಿ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಹೀಗಾಗಿ ಹೋಟೆಲ್ ಉದ್ಯಮದವರು ಹೆಚ್ಚಾಗಿ ನಂದಿನಿ ಬಳಸಿ, ರೈತರನ್ನು ಬೆಳೆಸಬೇಕಿದೆ. ಹೆಚ್ಚಚ್ಚು ನಂದಿನಿ ಉತ್ಪನ್ನಗಳನ್ನೇ ಬಳಸಿ, ನಂದಿನಿ ಉತ್ಪನ್ನ ಕೊಂಚ ದರ ಹೆಚ್ಚಿದ್ದರೂ ಗುಣಮಟ್ಟದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಗ್ರಾಹಕರ ಆರೋಗ್ಯದ ದೃಷ್ಠಿಯಿಂದ ನಂದಿನಿ ಬಳಸಿ. ಮಹಾರಾಜರ ಕಾಲದಿಂದಲೂ ತಿರುಪತಿಗೆ ಮೈಸೂರಿನಿಂದಲೇ ತುಪ್ಪ ಹೋಗುತ್ತಿದೆ. ಇಲ್ಲಿ ಪ್ರಾಕೃತಿಕ ದತ್ತವಾಗಿ ಗೋವಿನ ಸಾಕಾಣಿಕೆ ಆಗುವುದರಿಂದ ಇಲ್ಲಿನ ತುಪ್ಪ, ಬೆಣ್ಣೆ, ಪನ್ನೀರ್ ಸಿಗಲಿದೆ ಎಂದು ಹೇಳಿದರು.
ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ಸಿ.ನಾರಾಯಣಗೌಡ ಮಾತನಾಡಿ, ನಂದಿನಿ ಉತ್ಪನ್ನಗಳು ಶ್ರೇಷ್ಠವಾಗಿದ್ದು, ಬೇರೆ ಒಕ್ಕೂಟಗಳಿಗೆ ಹೊಲಿಕೆ ಮಾಡಿದರೂ ಮೈಸೂರಿನ ನಂದಿನಿ ಹಾಲಿನ ಒಕ್ಕೂಟದ ಪರಿಶುದ್ಧವಾದ ಉತ್ಪನ್ನ ಸಿಗಲಿದೆ. ಈಗಾಗಲೇ ಅನೇಕ ಹೋಟೆಲ್‌ಗಳಲ್ಲಿ ನಂದಿನಿ ಹಾಲಿನ ಉತ್ಪನ್ನ ಬಳಸಲಾಗುತ್ತಿದೆ. ಸತ್ಯ, ಸ್ವಚ್ಚತೆ, ಶುದ್ಧ ಉದ್ಯಮ ಆಗಿರುವುದರಿಂದ ನಾವು ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆ. ಮತ್ತಷ್ಟು ಮಂದಿಯೂ ಬಳಸಬೇಕೆಂದು ಹೇಳಿದರು.
ನಂದಿನಿಯ ಪನ್ನೀರ್, ಹಾಲು, ಬೆಣ್ಣೆ, ತುಪ್ಪ ಶೇ.40ರಿಂದ ಶೇ.50ರಷ್ಟು ಮಂದಿ ಗ್ರಾಹಕರಿಗೆ ನಂದಿನಿಯ ಉತ್ಪನ್ನಗಳನ್ನು ನೀಡಲಾಗುತ್ತಿದೆ. ಈಗ ಹೋಟೆಲ್ ಮಾಲೀಕರು ಹೆಚ್ಚು ಎಜೆನ್ಸಿ ಸಹ ಪಡೆದು ನೇರವಾಗಿ ಕೊಳ್ಳಬಹುದಾಗಿದೆ. ಕಳೆದ 10 ವರ್ಷದಲ್ಲಿ ಇದು ಮೂರನೇ ಭೇಟಿಯಾಗಿದ್ದು, 8ವರ್ಷದ ಹಿಂದೆ ಈರೇಗೌಡ ನೇತೃತ್ವದಲ್ಲಿ ಭೇಟಿ ಮಾಡಿದ್ದೇವೆ. ಜತೆಗೆ ಮೂರು ವರ್ಷದ ಹಿಂದೆಯೂ ಸಹ ಬಂದೂ ಭೇಟಿ ಮಾಡಿದ್ದೇವು ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಓಂಪ್ರಕಾಶ್ ಮಾತನಾಡಿ, ಸಹಕಾರ ತತ್ವದಡಿಯಲ್ಲಿ ನಂದಿನಿ ನಡೆಯುತ್ತಿದ್ದು, 500ಎಂಎಲ್ ನಿಂದ ೫೦೦ ಲೀಟರ್‌ವರೆಗೂ ಹಾಲು ನೀಡುವವರು ನಮ್ಮ ಸೊಸೈಟಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಚ್ ಎಫ್ ಹಸುಗಳ ವ್ಯಾಮೋಹದಿಂದ ಹೈನೋದ್ಯಮ ಹೇರಳವಾಗಿ ಬೆಳೆಯುತ್ತಿದೆ. ಹೀಗಾಗಿ ಪ್ರತಿಯೊಬ್ಬರು ರೈತ ಸಂಸ್ಥೆಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಎಂದು ಕೋರಿದರು.
ಇದೇ ವೇಳೆ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ .ಎನ್. ಸುರೇಶ್‌ನಾಯ್ಕ್ ಮಾತನಾಡಿ, ಇತರೆ ಉತ್ಪನ್ನಗಳಿಗೆ ಹೊಲಿಕೆ ಮಾಡಿದರೆ ನಮ್ಮ ಉತ್ಪನ್ನ ಗುಣಮಟ್ಟದಿಂದ ಕೂಡಿದೆ. ಪನ್ನೀರು, ಬೆಣ್ಣೆ, ಹಾಲು, ತುಪ್ಪ ಮೊದಲಾದ ಉತ್ಪನ್ನಗಳನ್ನು ನಿಮಗೆ ಬೇಡಿಕೆ ಅನುಗುಣವಾಗಿ ಸರಬರಾಜು ಮಾಡಲು ಸಿದ್ಧರಿದ್ದೇವೆ. ಮಾತ್ರವಲ್ಲದೆ, ಮೈಮುಲ್ ಸದಾ ಹೋಟೆಲ್ ಉದ್ಯಮಿಗಳ ಸಲಹೆ, ಸಹಕಾರಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತೇವೆಂದರು.
ಹೋಟೆಲ್ ಮಾಲೀಕರ ಸಂಘದ ಸತೀಶ್, ರವಿಶಾಸ್ತ್ರಿ, ಗೋವಿಂದೇಗೌಡ, ಮೈಮುಲ್ ನಿರ್ದೇಶಕ ಸದಾನಂದ ಮಾತನಾಡಿದರು. ನಿರ್ದೆಶಕರಾದ ಎ.ಟಿ.ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಆರ್.ಚೆಲುವರಾಜು, ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್.ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್, ಉಪಸ್ಥಿತರಿದ್ದರು.

ವೀಕ್ಷಣೆಯ ಸಂಭ್ರಮ
200ಕ್ಕೂ ಹೆಚ್ಚು ಹೋಟೆಲ್ ಉದ್ಯಮಿಗಳು ಮೈಮುಲ್ ಉತ್ಪಾದನ ಘಟಕಕ್ಕೆ ಭೇಟಿ ನೀಡಿದರು. ಈ ವೇಳೆ ಹಾಲಿನ ಕೋಲ್ಡ್ ಸ್ಟೋರೆಂಜ್, ಭರ್ಫಿ, ಪನ್ನೀರ್, ಹಾಲು, ಮೈಸೂರು ಪಾಕ ತಯಾರಿಕೆ, ಪ್ಯಾಕಿಂಗ್ ಮೊದಲಾದವುಗಳನ್ನು ಕೂತೂಹಲದಿಂದ ಒಂದು ತಾಸಿಗೂ ಹೆಚ್ಚು ಕಾಲ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಈ ವೇಳೆ ನಂದಿನಿ ಉತ್ಪಾದನೆ ಹಾಗೂ ಪ್ಯಾಕಿಂಗ್‌ನ ಪ್ರತಿ ಹಂತದಲ್ಲಿಯೂ ಕೈಗೊಳ್ಳುವ ಸ್ವಚ್ಛತೆ, ಪರಿಶುದ್ಧತೆ, ವೈಜ್ಞಾನಿಕ, ತಾಂತ್ರಿಕ ಖಾತರಿಯ ಕಂಡು ನಿಬ್ಬೆರಗಾದರು.

Leave a Reply

Your email address will not be published. Required fields are marked *