ನಂದಿನಿ ಮನುಪ್ರಸಾದ್ ನಾಯಕ್
ಎಸ್.ಎಲ್.ಭೈರಪ್ಪ ನಿಧನ: ಮಾಜಿ ಮೇಯರ್ ಶಿವಕುಮಾರ್ ಕಂಬನಿ
ಮೈಸೂರು: ರಾಷ್ಟ್ರಪೂರಕ ಚಿಂತನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಭಿನ್ನ ಮಜಲು ನೀಡಿದ್ದ ಎಸ್.ಎಲ್.ಭೈರಪ್ಪ ಅವರು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದರು. ಅಂತಹ ಮೇರು ವ್ಯಕ್ತಿಯೊಂದಿಗೆ ಒಡನಾಡುವ ಅವಕಾಶ ಸಿಕ್ಕಿದ್ದೇ ನಮ್ಮ ಪಾಲಿನ ಪುಣ್ಯ ಎಂದು ಮಾಜಿ ಮೇಯರ್ ಶಿವಕುಮಾರ್ ಸ್ಮರಿಸಿದ್ದಾರೆ.
ಭೈರಪ್ಪ ಅವರ ಕೃತಿಗಳು ರಷ್ಯನ್, ಚೀನಿ ಭಾಷೆಗಳಿಗೂ ಅನುವಾದವಾಗಿವೆ. ಮಾತ್ರವಲ್ಲ, ಲಿಪಿಯೇ ಇಲ್ಲದ ಸಂಕೇತಿ ಭಾಷೆಗೂ ಅನುವಾದ ಆಗಿರುವುದು ಅವರ ಸಾಹಿತ್ಯದ ಶಕ್ತಿಗೆ ಸಾಕ್ಷಿಯಾಗಿದೆ.
ತಮ್ಮ ಕಾದಂಬರಿಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಭೈರಪ್ಪ ಅವರು ಗುಜರಾತ್ ಮತ್ತು ದೆಹಲಿಯಲ್ಲೂ ಬೋಧಕರಾಗಿದ್ದರು. ನಿವೃತ್ತಿ ಜೀವನ ಕಳೆಯಲು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದರು. ಕುವೆಂಪುನಗರದ ಉದಯರವಿ ರಸ್ತೆಯಲ್ಲಿ ವಾಸವಿದ್ದರು. ನಾನು ಪ್ರತಿನಿಧಿಸುವ ವಾರ್ಡ್ ಸಮೀಪದಲ್ಲೇ ಅವರ ಮನೆ ಇದ್ದ ಕಾರಣ ಅನೇಕ ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ ಸದಾವಕಾಶ ಸಿಕ್ಕಿತ್ತು. ಅವರಿಗಿದ್ದ ಭಾರತೀಯ ಪರಂಪರೆ, ನಾಗರಿಕ ಸಂವಿಧಾನ, ರಾಜಕೀಯ ಪ್ರಜ್ಞೆ, ಅಭಿವೃದ್ಧಿಯ ಮುನ್ನೋಟಗಳ ಸ್ಪಷ್ಟತೆಯನ್ನು ಕಂಡು ಚಕಿತನಾಗಿದ್ದೆ.
ತಲೆಮಾರುಗಳ ಸಾಕ್ಷಿ ಪ್ರಜ್ಞೆಯಂತಿದ್ದ ಭೈರಪ್ಪ ಅವರ ನಿರ್ಗಮನ ನಿರ್ವಾತ ಸೃಷ್ಟಿಸಿದೆ. ಮಾರ್ಗದರ್ಶಿ ವ್ಯಕ್ತಿತ್ವದ ಅವರ ಅಗಲಿಕೆ ತುಂಬಲಾರದ ನಷ್ಟ ನಷ್ಟವಾಗಿದೆ ಎಂದು ಶಿವಕುಮಾರ್ ಪ್ರಕಟಣೆ ಮೂಲಕ ಸಂತಾಪ ಸೂಚಿಸಿದ್ದಾರೆ.
ಮೇರು ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರಕಿದ ಹಿನ್ನೆಲೆಯಲ್ಲಿ ಕುವೆಂಪುನಗರದ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಲಾಗಿತ್ತು.