ವೃತ್ತಿ ಯಾವುದಾದರೇನು ನಾವೆಲ್ಲರೂ ವಿಶ್ವಕರ್ಮರು ಎಂಬ ಮನೋಭಾವ ಇರಬೇಕು -ತನ್ವೀರ್ ಸೇಠ್

ನಂದಿನಿ ಮನುಪ್ರಸಾದ್ ನಾಯಕ್

 

*ವೃತ್ತಿ ಯಾವುದಾದರೇನು ನಾವೆಲ್ಲರೂ ವಿಶ್ವಕರ್ಮರು ಎಂಬ ಮನೋಭಾವ ಇರಬೇಕು
-ತನ್ವೀರ್ ಸೇಠ್*

ಮೈಸೂರು,ಸೆ.17(ಕರ್ನಾಟಕವಾರ್ತೆ):- ನಮ್ಮ ವೃತ್ತಿ ಏನೇ ಇರಬಹುದು ಆದರೆ ನಾವೆಲ್ಲರೂ ವಿಶ್ವಕರ್ಮರು ಎಂಬ ಭಾವ ಎಲ್ಲರಲ್ಲೂ ಇರಬೇಕು ಎಂದು ನರಸಿಂಹರಾಜ ವಿಧಾನಸಬಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಸಹಯೋಗದೊಂದಿಗೆ ನಗರದ ಕರ್ನಾಟಕ ಕಲಾಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರು ಅವರು ಹೇಳಿದಂತೆ, ಭಗವಂತನ ರೂಪಗಳು ಬೇರೆ ಬೇರೆ ಇರಬಹುದು. ಆದರೆ ಎಲ್ಲರಿಗೂ ಮೂಲ ದೇವ ಒಬ್ಬನೇ ಆಗಿದ್ದಾನೆ. ಹಾಗೇಯೇ ನಮ್ಮೆಲ್ಲರ ಕಸುಬುಗಳು ಬೇರೆ ಬೇರೆ ಇದ್ದರೂ ಸಹ ನಮ್ಮೆಲ್ಲರ ಅಸ್ತಿತ್ವ ಕಾಪಾಡಿಕೊಳ್ಳಲು ಎಲ್ಲರೂ ಒಂದಾಗುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಯಾವುದೇ ಒಂದು ಆಚಾರ ವಿಚಾರ ಅಷ್ಟೇ ಅಲ್ಲದೇ ಅನಾದಿ ಕಾಲದಿಂದಲೂ ವಸ್ತು ವಿಚಾರಕ್ಕೆ ರೂಪ ಕೊಡುವ ಶಕ್ತಿ ವಿಶ್ವಕರ್ಮ ಜನಾಂಗಕ್ಕೆ ದೊರೆತಿರುವ ವರವಾಗಿದ್ದು, ಪ್ರಸ್ತುತ ಅಭಿವೃದ್ಧಿ ವಿಚಾರವಾಗಿ ಎಲ್ಲೆಡೆ ಮೆಷಿನ್ ಗಳು ಬರುತ್ತಿದ್ದು, ನಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತಿದೆ. ಆದರೆ ಇದನ್ನು ಅಲ್ಲಗಳೆಯದೇ ನಮ್ಮ ಮೂಲ ಕಸುಬನ್ನು ಕಾಪಾಡಿಕೊಂಡು ಬರುವ ಹಿತಾಸಕ್ತಿ ನಮ್ಮಲ್ಲಿರಬೇಕಾಗಿದೆ ಎಂದರು.

ವಿಶ್ವಕರ್ಮ ಕೃಪೆ ಮತ್ತು ದಯೆಯಿಂದಾಗಿ ಚಿನ್ನ ಬೆಳ್ಳಿ, ಕಲ್ಲುಬಂಡೆಗಳಿಗೆ, ಮರಗಳಿಗೆ ರೂಪ ಕೊಡುವ ಶಕ್ತಿ ವಿಶ್ವಕರ್ಮದವರಿಗೆ ನೀಡಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಜನಾಂಗದ ಸಮಸ್ಯೆ ಪರಿಹಾರಕ್ಕೆ ದಾರಿ ತಪ್ಪದೇ ಎಲ್ಲರೂ ಒಗ್ಗೂಡಬೇಕಿದ್ದು, ಸಾಂಪ್ರದಾಯಿಕವಾದ ನಮ್ಮ ಕಲೆಗಳನ್ನು ಕಾಪಾಡಿಕೊಳ್ಳಬೇಕಿದೆ. ಸಮುದಾಯ ಎಂದು ಹೇಳುವ ಸಂದರ್ಭದಲ್ಲಿ ನಮ್ಮಲ್ಲೇ ಭಿನ್ನತೆ ಇರಬಾರದು. ನಿಮ್ಮಲ್ಲಿರುವ ರೂಪ ಕೊಡುವ ಶಕ್ತಿ ಸದಾ ಮುಂದುವರೆಯಬೇಕೆoದು ಆಶಿಸಿದರು.

ಮರವಣಿಗೆ ಸಾಗಿದ ದಾರಿ – ಇರ್ವಿನ್ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಹೊರಟು ಕೆ.ಟಿ.ಸ್ತ್ರೀಟ್, ಅಶೋಕ ರಸ್ತೆ ಮೂಲಕ ದೊಡ್ಡ ಗಡಿಯಾರ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿoದ ಕೆ.ಆರ್.ವೃತ್ತ, ಡಿ. ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ರಸ್ತೆ ಮೂಲಕ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರಕ್ಕೆ ವಿಶ್ವಕರ್ಮ ಜಯಂತಿಯ ಮೆರವಣಿಗೆ ಸಾಗಿತು.

ಕಾರ್ಯಕ್ರಮದಲ್ಲಿ ಹಾಸನದ ಅರೆಮಾದನಹಳ್ಳಿ ವಿಶ್ವ ಬ್ರಾಹ್ಮಣರ ಮಹಾ ಸಂಸ್ಥಾನ ಮಠದ ವಿಶ್ವ ಜಗದ್ಗುರು ಪೀಠದ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿರವರು, ವಿಧಾನ ಪರಿಷತ್ ಶಾಸಕರಾದ ಡಿ.ತಿಮ್ಮಯ್ಯ, ಬಾಲರಾಮ ಮೂರ್ತಿ ಶಿಲ್ಪಕಾರರಾದ ಅರುಣ್ ಯೋಗಿರಾಜ್, ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ದೇಶಕರಾದ ಹೇಮಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಎಂ.ಡಿ. ಸುದರ್ಶನ್, ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಹುಚ್ಚಪ್ಪ, ಪದಾಧಿಕಾರಿಗಳಾದ ಸಿ.ಟಿ.ಆಚಾರ್, ರೇವಣ್ಣ, ಎ.ಎನ್.ಸ್ವಾಮಿ, ಜಯಕುಮಾರ್, ಎನ್.ಚಂದ್ರು, ನಿಂಗಾಚಾರ್, ಜಯರಾಮಾಚಾರ್ ಸೇರಿದಂತೆ ಆಚರಣಾ ಸಮಿತಿಯ ವಿವಿಧ ಸಂಘ ಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *