ಎಲ್‌ಐಸಿ ಮ್ಯೂಚುವಲ್‌ ಫಂಡ್‌ (LIC MF) ಮೈಸೂರಿನಲ್ಲಿ 2ನೇ ಶಾಖೆ ಆರಂಭ

ನಂದಿನಿ ಮೈಸೂರು

ಮೈಸೂರಿನಲ್ಲಿ ಎಲ್‌ಐಸಿ ಎಂಎಫ್‌ ಎರಡನೇ ಶಾಖೆಗೆ ಚಾಲನೆ

2 ಮತ್ತು 3ನೇ ಹಂತದ ನಗರಗಳಲ್ಲಿ ವಹಿವಾಟು ವಿಸ್ತರಣೆ ಗುರಿ

ಮೈಸೂರು, ಮಾರ್ಚ್‌ 12- ಭಾರತದ ವಿಶ್ವಸನೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳಲ್ಲಿ ಒಂದಾಗಿರುವ ಎಲ್‌ಐಸಿ ಮ್ಯೂಚುವಲ್‌ ಫಂಡ್‌ (LIC MF) ಮೈಸೂರಿನಲ್ಲಿ ತನ್ನ ಎರಡನೇ ಶಾಖೆಯನ್ನು ಆರಂಭಿಸಿದೆ.

ಎಲ್‌ಐಸಿ ಎಂಎಫ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ರವಿ ಕುಮಾರ್‌ ಝಾ ಅವರು ಇಂದು ಹೊಸ ಶಾಖೆಯನ್ನು ಉದ್ಘಾಟಿಸಿದರು.

ಮೈಸೂರು ಸಾಂಸ್ಕೃತಿಕವಾಗಿ ಶ್ರೀಮಂತ ನಗರವಾಗಿದ್ದು ರಾಜ್ಯದ ದಕ್ಷಿಣದ ಕೇಂದ್ರ ಭಾಗದಲ್ಲಿದೆ. ಅಸೋಸಿಯೇಷನ್‌ ಆಫ್‌ ಮ್ಯೂಚುವಲ್‌ ಫಂಡ್ಸ್‌ ಇನ್‌ ಇಂಡಿಯಾ (ಎಎಂಎಫ್‌ಐ) ಸಂಸ್ಥೆಯ ಪ್ರಕಾರ ಈ ಪ್ರಾಂತ್ಯದಲ್ಲಿ ಎಲ್‌ಐಸಿ ಕಂಪೆನಿಯ ನಿರ್ವಹಣೆಯಡಿ ಬರುವ ಸಂಪತ್ತಿನ ಮೌಲ್ಯ (ಎಯುಎಂ) 2024ರ ಡಿಸೆಂಬರ್‌ 31ಕ್ಕೆ ಅನ್ವಯವಾಗುವಂತೆ 8,000 ಕೋಟಿ ರೂಪಾಯಿಗಳಾಗಿವೆ. ಒಟ್ಟು ಎಯುಎಂನ ಶೇ 1.17ರಷ್ಟಿದೆ. ಒಟ್ಟು ಎಯುಎಂ 2025ರ ಫೆಬ್ರುವರಿ 28ಕ್ಕೆ ಅನ್ವಯವಾಗುವಂತೆ 36,209 ಕೋಟಿ ರೂಪಾಯಿಗಳಾಗಿವೆ.

ಮ್ಯೂಚುವಲ್‌ ಫಂಡ್‌ ವಹಿವಾಟು ಅಭಿವೃದ್ಧಿಗೆ ಕರ್ನಾಟಕದಲ್ಲಿ ಅಪಾರವಾದ ಅವಕಾಶಗಳಾಗಿವೆ. ರಾಜ್ಯವಾರು ಮಾಸಿಕ ಎಯುಎಂನಲ್ಲಿ (ಎಎಯುಎಂ) ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. 2025ರ ಜನವರಿಯಲ್ಲಿ ಕರ್ನಾಟಕದ ಎಎಯುಎಂ 4.72 ಲಕ್ಷ ಕೋಟಿ ರೂಪಾಯಿಗಳಾಗಿವೆ. ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಎಯುಎಂ ಇದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಲ್‌ಐಸಿ ಎಂಎಫ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ರವಿ ಕುಮಾರ್‌ ಝಾ ಅವರು “ದೇಶದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮ್ಯೂಚುವಲ್‌ ಫಂಡ್‌ ಉದ್ಯಮ ಅಭಿವೃದ್ಧಿ ಕಾಣುವ ನಿರೀಕ್ಷೆ ಇದ್ದು, ಮೈಸೂರಿನಲ್ಲಿ ನಾವು ಈ ಕಾರಣಕ್ಕಾಗಿಯೇ ನಮ್ಮ ವಹಿವಾಟನ್ನು ವಿಸ್ತರಿಸುತ್ತಿದ್ದೇವೆ. ಮೈಸೂರು ಜ್ಞಾನಾಧಾರಿತ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸಾಂಸ್ಕೃತಿಕವಾಗಿಯೂ ಈ ನಗರ ಅಭಿವೃದ್ಧಿ ಹೊಂದಿದೆ. ಹೆಚ್ಚು ಆದಾಯದ ಜನರು ಮತ್ತು ವೃತ್ತಿಪರರು ಈ ನಗರವನ್ನು ತಮ್ಮ ವಾಸಸ್ಥಾನವಾಗಿ ಹೆಚ್ಚುಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎರಡನೇ ಶಾಖೆಯ ಆರಂಭದ ಮೂಲಕ ಇಲ್ಲಿಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ” ಎಂದು ತಿಳಿಸಿದರು.

ಹೊಸ ಶಾಖೆಯ ವಿಳಾಸ ಹೀಗಿದೆ; ಎಲ್‌ಐಸಿ ಎಂಎಫ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌, ನಂ. 245, 12ನೇ ಮುಖ್ಯರಸ್ತೆ, 5ನೇ ಕ್ರಾಸ್‌, ಸರಸ್ವತಿಪುರಂ, ಜವರೇಗೌಡ ಪಾರ್ಕ್‌ ಎದುರು, ಮೈಸೂರು 570009

Leave a Reply

Your email address will not be published. Required fields are marked *