ನಂದಿನಿ ಮೈಸೂರು
ತಾನು ಓದಿದ ಸರ್ಕಾರಿ ಶಾಲೆಗೆ 1.40 ರೂ ಲಕ್ಷದ ಬಣ್ಣವನ್ನು ಉಚಿತವಾಗಿ ನೀಡಿದ ಹಳೆ ವಿದ್ಯಾರ್ಥಿ ನಾಗೇಗೌಡ.
ಎಚ್ ಡಿ ಕೋಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆಗೆ ಅಲ್ಲಿನ ಹಿರಿಯ ವಿದ್ಯಾರ್ಥಿಯೊಬ್ಬರು ಸರಿಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಬಣ್ಣ ಹೊಡೆಸುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.
ಎಚ್ ಡಿ ಕೋಟೆ ಪಟ್ಟಣದ ಕಾಳಿದಾಸ ರಸ್ತೆಯ ನಿವಾಸಿ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆಯ ಹಿರಿಯ ವಿದ್ಯಾರ್ಥಿಯೂ ಹಾಗೂ ಎಚ್ ಡಿ ಕೋಟೆಯ ಪ್ರತಿಷ್ಠಿತ ಬಣ್ಣದ ಅಂಗಡಿಯಾದ ಶ್ರೀ ವಿನಾಯಕ ಟೈಂಸ್ ಅಂಡ್ ಹಾರ್ಡ್ ವೇರ್ ಅಂಗಡಿ ಮಾಲೀಕರಾದ ನಾಗೇಗೌಡ ಅವರು, 1.40 ಲಕ್ಷ ಮೌಲ್ಯದ ಬಣ್ಣವನ್ನು ಉಚಿತವಾಗಿ ಹೊಡೆಸಿ ಗಮನಸೆಳೆದಿದ್ದಾರೆ. ಇದರ ಜೊತೆಗೆ ಕಾರ್ಮಿಕರೂಕೂಡಾ ಉಚಿತವಾಗಿ ಕೆಲಸ ಮಾಡುವ ಮೂಲಕ ಈ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ನಾಗೇಗೌಡ ಅವರಿಗೆ ಪ್ರತಿಷ್ಠಿತ ಬಣ್ಣದ ಕಂಪನಿಯಾದ ಇಂಡಿಗೋ ಸೇವಾ ಉತ್ಸವ ಅವರು ಕೂಡ ಕೈಜೋಡಿಸಿದ್ದು , ಸುಮಾರು 20ಕ್ಕೂ ಹೆಚ್ಚು ಪೈಂಟರ್ ಗಳು ಕೂಡಾ ಉಚಿತವಾಗಿ ಬಣ್ಣ ಬಳಿಯುವ ಕೆಲಸ ಮಾಡಿದ್ದು ಅವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು, ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು.
143 ವರ್ಷದ ಇತಿಹಾಸ ಹೊಂದಿರುವ ಈ ಶಾಲೆ, ಕಳೆದ 25 ವರ್ಷಗಳಿಂದಲೂ ಕೂಡಾ ಯಾವುದೇ ರೀತಿಯ ಸುಣ್ಣ ಬಣ್ಣ ಕಂಡಿರಲಿಲ್ಲ. 1882ರಲ್ಲಿ ಸ್ಥಾಪನೆಯಾದ ಈ ಶಾಲೆಯು ತಾಲೂಕಿನವರೇ ಆದ ಎಂ.ಶಿವಣ್ಣ ಅವರು ಸಚಿವರಾಗಿದ್ದಾಗ ಶತಮಾನೋತ್ಸವ ಆಚರಿಸಿತ್ತು.
ತಾಲೂಕಿನಲ್ಲೇ ಪ್ರಥಮ ಸರ್ಕಾರಿ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದ್ದ ಈ ಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ತಾಲ್ಲೂಕಿನ ಪ್ರಮುಖ ಶಾಲೆಗಳಲ್ಲಿ ಇದು ಮೊದಲನೇ ಸ್ಥಾನ ದಲ್ಲಿತ್ತು, ಪಕ್ಷೇತರ ಚಟುವಟಕಗಳಲ್ಲಿ ಇಲ್ಲಿನ ಮಕ್ಕಳು ಇತರ ಬೇರೆ ಶಾಲೆಗಳ ಮಕ್ಕಳಿಗಿಂತಲೂ ಮುಂದಿರುತ್ತಿದ್ದರು. ಆದರೆ, ಕ್ರಮೇಣ ಖಾಸಗಿ ಶಾಲೆಗಳ ಪೈಪೋಟಿ ಮತ್ತು ಸರ್ಕಾರವು ಸ್ಥಳೀಯವಾಗಿ ಮತ್ತಷ್ಟು ಶಾಲೆಗಳನ್ನು ತೆರೆದ ಕಾರಣದಿಂದ ದಾಖಲಾತಿ ಕುಸಿದಿದೆ. ಸಾವಿರಾರು ಮಂದಿ ಕಲಿಯುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 52 ಮಂದಿ ವಿದ್ಯಾರ್ಥಿಗಳು ಮಾತ್ರ ಪಾಠ ಕಲಿಯುತ್ತಿದ್ದಾರೆ.
ಹಿರಿಯ ವಿದ್ಯಾರ್ಥಿ ಹಾಗೂ ಉಚಿತವಾಗಿ ಬಣ್ಣ ಬಳಿಸುತ್ತಿರುವ ನಾಗೇಗೌಡ ,ಕೊಠಡಿಗಳು ಮತ್ತು ಕಾಂಪೌಂಡ್ ಗಳಿಗೆ ಬಣ್ಣ ಪಡೆದು ಹಲವು ವರ್ಷಗಳೇ ಕಳೆದಿದ್ದರಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದು, ಹೀಗಾಗಿ ಶಿಕ್ಷಕರು ಮತ್ತು ಕೆಲವು ಮಾರ್ಗದರ್ಶಕರ ಮಾರ್ಗದರ್ಶನದ ಮೇಲೆ ಈ ಕೆಲಸಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಸಾಮಾಜಿಕ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು
ಕಳೆದ ವರ್ಷ 79 ವಿದ್ಯಾರ್ಥಿಗಳ ದಾಖಲಾತಿ ಇತ್ತು. ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಕೊರತೆಯೂ. 8ನೇ ತರಗತಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಕಳುಹಿಸಲಾಯಿತು. ಆದ್ದರಿಂದ ಸಂಖ್ಯೆ 52ಕ್ಕೆ ಇಳಿದಿದೆ. ನಮ್ಮ ಮನವಿಗೆ ಸ್ಪಂದಿಸಿದ ನಾಗೇಗೌಡ ಅವರು ಬಣ್ಣ ಮಾಡಿಸಿಕೊಡುತ್ತಿದ್ದಾರೆ’ ಎಂದು ಮುಖ್ಯ ಶಿಕ್ಷಕ ಎಚ್.ಡಿ. ರಾಮಚಂದ್ರು ಮಾಹಿತಿ ನೀಡಿದರು.