ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ, ನಾಡೋಜ ಡಾ. ಹಂಪಾ ನಾಗರಾಜಯ್ಯರಿಂದ ದಸರಾಗೆ ಚಾಲನೆ

ದಸರಾ ಸ್ಪೇಷಲ್: ನಂದಿನಿ ಮೈಸೂರು

ಇಂದು ಶುಭ ವೃಶ್ಚಿಕ ಲಗ್ನದಲ್ಲಿ
ನಾಡಿನ ಅದಿದೇವತೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿಲಾಯಿತು.

ನಾಡಿನ ಹಿರಿಯ ಸಾಹಿತಿ, ನಾಡೋಜ ಡಾ. ಹಂಪಾ ನಾಗರಾಜಯ್ಯ ಅವರು ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಬೆಳ್ಳಿ ರಥದಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮುಖೇನ 2024ರ ದಸರಾ ಮಹೋತ್ಸವಕ್ಕೆ ನಾಂದಿ ಹಾಡಿದರು.

ನಂತರ ಮಾತನಾಡಿದ ಅವರು
ಪರಂಪರೆಯ ಕಿರು ಪರಿಚಯ ಇಂದಿನ ಹೊಸ ತಲೆಮಾರಿನವರಿಗೆ ಆಗುತ್ತದೆ. ದೇಸಿವಾದ್ಯ ಮೇಳಗಳು, ಕಲೆ, ಕುಣಿತ, ಹಾಡು, ಸ್ತಬ್ಧಚಿತ್ರಗಳು, ಬಣ್ಣದ ವೇಷಗಳು, ಕುದುರೆಗಳ ಸಂಚಲನ, ಜಂಬೂ ಸವಾರಿ, ಮುಂತಾದವುಗಳ ಪರಿಚಯ ಶಾಲಾಕಾಲೇಜಲ್ಲಿ ಸಿಗುವುದಿಲ್ಲ. ಹೊಸ ತಲೆಮಾರಿಗೆ ನಮ್ಮ ನಾಡಿನ ಬಹುರೂಪಿ ಸಂಸ್ಕೃತಿಯ ಮತ್ತು ಅಸ್ಮಿತೆಯ ಆಯಾಮ ಅನುಭವವಾಗುತ್ತದೆ.
ದಸರ ಹಬ್ಬದ ಸಂದರ್ಭದಲ್ಲಿ ಹಿಂದಿನಿಂದ ಪ್ರೋತ್ಸಾಹಿಸುತ್ತಿದ್ದ ದೇಸಿ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ಇನ್ನು ಮುಂದೆಯೂ ದೇಸೀ ಕ್ರೀಡೆಯಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ನಾಡಿನ ಉದ್ದಗಲಗಳಲ್ಲಿ ಗರಡಿಮನೆಗಳು ಇದ್ದುವು. ನಾನು ಮಂಡ್ಯದಲ್ಲಿ ಆರನೆಯ ತರಗತಿ ವಿದ್ಯಾರ್ಥಿ ಆಗಿದ್ದಾಗ 1948ರಲ್ಲಿ ನಡೆದ ಘಟನೆ ನೆನಪಾಗುತ್ತದೆ. ಆಗ ಮೈಸೂರು ಉಸ್ತಾದ್ ಟೈಗರ್ ರಾಮು ಎಂಬ ಪೈಲ್ವಾನರು ತುಂಬಾ ಜನಪ್ರಿಯರಾಗಿದ್ದರು. ಅದನ್ನು ಕಂಡು ನಾನು ಪೈಲ್ವಾನ್ಆ ಗಬೇಕೆಂದು ಗರಡಿಮನೆಗೆ ಹೋಗುತ್ತಿದ್ದೆ. ತಲೆತುಂಬ ಗುಂಗರು ಕೂದಲಿತ್ತು. ಆದರೆ ಉಸ್ತಾದ್ ಕಾಳಪ್ಪನವರು ಗರಡಿಯಲ್ಲಿ ಕ್ರಾಪು ಸರಿಯಲ್ಲವೆಂದರು. ಸರಿ ನಾನು ತಲೆಬೋಳಿಸಿ ಮನೆಗೆ ಹೋದೆ. ನಮ್ಮ ಚಿಕ್ಕಪ್ಪ “ಎಂಥಾ ತಪ್ಪು ಮಾಡಿದೆಯೋ ಬೇಕೂಫ, ತಂದೆ ಬದುಕಿರುವಾಗ ತಲೆಬೋಳಿಸಿ ಅಪಶಕುನವಾಯಿತು” ಎಂದು ಚೆನ್ನಾಗಿ ಬೈದು ಗರಡಿಮನೆಗೆ ಕಾಲಿಡದಂತೆ ಮಾಡಿದರು.
ಅದರಿಂದ ಈ ನಾಡಿಗೆ ಒಬ್ಬ ಶ್ರೇಷ್ಠ ಪೈಲ್ವಾನ ಸಿಗಬಹುದಾದ ಅವಕಾಶ ತಪ್ಪಿತಲ್ಲಾಎಂದು ಈಗಲೂ ವ್ಯಸನವಿದೆ!. ನಮ್ಮ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ, ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿರುವುದನ್ನು ನೋಡಿದರೆ ಅವರೂ ಕೂಡ ಗರಡಿಮನೆಯಲ್ಲಿ ಸಾಮುಮಾಡಿರಬೇಕೆಂಬ ಗುಮಾನಿ ನನಗಿದೆ. ಅಹುದು ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಆದರೆ ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕಾಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ. ವೆಂಕಟೇಶ್, ಶಿವರಾಜ ತಂಗಡಗಿ,ಮುನಿಯಪ್ಪ, ಎಚ್.ಕೆ.ಪಾಟೀಲ್,ಶ್ರೀವತ್ಸ,ಹರೀಶ್ ಗೌಡ,ದರ್ಶನ್ ದ್ರುವನಾರಾಯಣ್,ರವಿಶಂಕರ್,ಜಿ.ಟಿದೇವೇಗೌಡ,ತನ್ವೀರ್ ಸೇಠ್,ಅನಿಲ್ ಚಿಕ್ಕಮಾದು,ಹರೀಶ್ ಗೌಡ,ಡಾ.ತಿಮ್ಮಯ್ಯ,ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ,ಕಮಿಷನರ್ ಸೀಮಾ ಲಾಟ್ಕರ್,ಎಸ್ಪಿ ವಿಷ್ಣುವರ್ಧನ್, ಸೇರಿದಂತೆ ಶಾಸಕರು,ಅಧಿಕಾರಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *