ದಸರಾ ದೀಪಾಲಂಕಾರಕ್ಕೆ ಡ್ರೋನ್ ಪ್ರದರ್ಶನದ ಮೆರಗು

ನಂದಿನಿ ಮೈಸೂರು

 

*ದಸರಾ ದೀಪಾಲಂಕಾರಕ್ಕೆ ಡ್ರೋನ್ ಪ್ರದರ್ಶನದ ಮೆರಗು*

– *1500 ಡ್ರೋನ್‌ ಬಳಸಿ ಆಗಸದಲ್ಲಿ ಅದ್ಭುತ ವಿನ್ಯಾಸ ನಿರ್ಮಾಣ*
– ದಸರಾ ದೀಪಾಲಂಕಾರದ ಪೋಸ್ಟರ್ ಬಿಡುಗೆ ಮಾಡಿದ ಸಚಿವ ಎಚ್.ಸಿ.ಮಹದೇವಪ್ಪ*

*ಮೈಸೂರು, ಸೆ.23, 2024*: ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದಸರಾ ದೀಪಾಲಂಕಾರಕ್ಕೆ ಈ ಬಾರಿ ಡ್ರೋನ್ ಪ್ರದರ್ಶನ ಹೊಸ ಮೆರಗು ನೀಡಲಿದ್ದು, 1500 ಡ್ರೋನ್ ಗಳು ಆಗಸದಲ್ಲಿ ಹೊಸ ಚಿತ್ತಾರ ಮೂಡಿಸಲಿವೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದಸರಾ ದೀಪಾಲಂಕಾರದ ಪೋಸ್ಟರ್ ಗಳನ್ನು ಚೆಸ್ಕ್ ಕಚೇರಿಯಲ್ಲಿ ಸೋಮವಾರ ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಈ ಮಾಹಿತಿ ನೀಡಿದರು.

“ದಸರಾ ದೀಪಾಲಂಕಾರ ಪ್ರಮುಖ ಆಕರ್ಷಣೆಯಾಗಿದ್ದು, 21 ದಿನದಗಳ ಕಾಲ ಮೈಸೂರು ನಗರವನ್ನು ಬೆಳಗಲಿದೆ. ಈ ಬಾರಿಯ ದೀಪಾಲಂಕಾರವನ್ನು ಅತ್ಯಂತ ಆಕರ್ಷಣೀಯಗೊಳಿಸಲು ಸೆಸ್ಕ್‌ ಅಧಿಕಾರಿಗಳ ತಂಡ ಸಾಕಷ್ಟು ಮುತುವರ್ಜಿ ವಹಿಸಿದೆ. ಒಟ್ಟು 130 ಕಿ.ಮೀ. ದೀಪಾಲಂಕಾರ ಮಾಡುತ್ತಿದ್ದು, 100 ವೃತ್ತಗಳನ್ನು ಅಲಂಕರಿಸುವುದರ ಜತೆದೆ 65 ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದೆ. ದಸರಾ ದೀಪಾಲಂಕಾರಕ್ಕಾಗಿ 6.50 ಕೋಟಿ ರೂ. ವೆಚ್ಚವಾಗುತ್ತಿದ್ದು, 2881 ಕಿ.ವ್ಯಾ. ಅಂದಾಜು ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಭಾರ ಹಾಗೂ 242012 ಯೂನಿಟ್‌ಗಳ ವಿದ್ಯುತ್‌ ಬಳಕೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.

*ಡ್ರೋನ್‌ ಶೋ ಆಕರ್ಷಣೆ*
“ದಸರಾ ದೀಪಾಲಂಕಾರದೊಂದಿಗೆ ಇದೇ ಮೊದಲ ಬಾರಿಗೆ ಡ್ರೋನ್‌ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್.ಇ.ಡಿ. ಬಲ್ಪ್‌ಗಳನ್ನು ಅಳವಡಿಸಿರುವ ಸುಮಾರು 1500 ಡೋನ್‌ಗಳನ್ನು ಬಳಸಿ ಆಕಾಶದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸಲಾಗುವುದು. ಅಕ್ಟೋಬರ್‌ 6, 7ರಂದು ಹಾಗೂ 11, 12ರಂದು ರಾತ್ರಿ 8 ಗಂಟೆಯಿಂದ 8.15ರವರೆಗೆ ಡ್ರೋನ್‌ ಪ್ರದರ್ಶನ ನಡೆಯಲಿದ್ದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅ. 6 ಮತ್ತು 7ರಂದು ಡ್ರೋನ್‌ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿರುತ್ತದೆ” ಎಂದರು.

*ವಿದ್ಯುತ್‌ ರಥ ಸಂಚಾರ*
ದಸರಾ 2024ರ ಸಂದರ್ಭದಲ್ಲಿ “ಪವರ್‌ ಮ್ಯಾನ್‌”ಗಳ ಕರ್ತವ್ಯಗಳು, ಗೃಹಜ್ಯೋತಿ, ಕೃಷಿ ಬಳಕೆಗೆ ಸೌರ ವಿದ್ಯುತ್ ಪಂಪ್ ಸೆಟ್ ಗಳು, ವಿದ್ಯುತ್ ಸುರಕ್ಷತೆ ಹಾಗೂ ನುಡಿದಂತೆ ನಡೆದ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ವಿದ್ಯುತ್ ರಥವನ್ನು ರೂಪಿಸಲಾಗುವುದು. ಈ ರಥ ಅ.3ರಂದು ಉದ್ಘಾಟನೆಗೊಳ್ಳಲಿದ್ದು, ದಸರಾ ನವರಾತ್ರಿಯ 10 ದಿನಗಳ ಕಾಲ ಮೈಸೂರಿನ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪ್ರದರ್ಶಿಸಲಾಗುವುದು” ಎಂದು ಸಚಿವರು ವಿವರಿಸಿದರು.

ನಿಗಮದ ಅಧ್ಯಕ್ಷರಾದ ರಮೇಶ್‌ ಬಂಡಿಸಿದ್ದೇಗೌಡ ಮಾತನಾಡಿ, “ದಸರಾ ದೀಪಾಲಂಕಾರದ ಜತೆಗೆ ಈ ಬಾರಿ ಡ್ರೋನ್‌ ಪ್ರದರ್ಶನ ನಡೆಸಲಾಗುತ್ತಿದೆ. ವಾರಣಾಸಿ, ಹರಿದ್ವಾರಗಳಲ್ಲಿ ಡ್ರೋನ್‌ ಪ್ರದರ್ಶನ ನೀಡಿರುವ ಕಂಪನಿಯ ಮೂಲಕ ಈ ಪ್ರದರ್ಶನ ನಡೆಸುತ್ತಿದ್ದು, 10-15 ವಿನ್ಯಾಸಗಳನ್ನು ಪ್ರದರ್ಶನ ಮಾಡಲಾಗುವುದು. ಈ ಬಾರಿ ದಸರಾ ದೀಪಾಲಂಕಾರವನ್ನು ವಿಭಿನ್ನವಾಗಿ ನಡೆಸಲು ನಿಗಮದ ವತಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುರಕ್ಷತೆಯ ಬಗ್ಗೆಯೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಕೆ.ಎಂ.ಮುನಿಗೋಪಾಲ್‌ ರಾಜು, ಸೆಸ್ಕ್‌ ಹಣಕಾಸು ನಿರ್ದೇಶಕರಾದ ಶೇಖ್ ಮಹೀಮುಲ್ಲಾ, ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *