ನಂದಿನಿ ಮೈಸೂರು
ಚನ್ನಪಟ್ಟಣ: ತಾಲೂಕಿನ ಗೌಡಗೆರೆಯ ಪ್ರಸಿದ್ದ ಶ್ರೀ ಬಸವಪ್ಪ, ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಭೀಮನ ಅಮಾವಾಸ್ಯೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ತಾಯಿಯ ದರ್ಶನ ಪಡೆದು ಪುನೀತರಾದರು.
ಅಮಾವಾಸ್ಯೆ ಪ್ರಯುಕ್ತ ಶನಿವಾರ ಮಧ್ಯರಾತ್ರಿ ಎರಡು ಗಂಟೆಯಿಂದ ಭಾನುವಾರ ಮಧ್ಯಾಹ್ನ ೨ ಗಂಟೆಯವರೆಗೆ ಅಮ್ಮನವರ ಮೂಲಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ದೇವಿಗೆ ಮೂರು ಮಹಾಮಂಗಳಾರತಿ ನಡೆಯಿತು. ಮುಂಜಾನೆ ೪.೨೮ ಕ್ಕೆ ತಾಯಿಗೆ ಮೊದಲ ಮಹಾ ಆರತಿ ಜರುಗಿತು. ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ಸರತಿಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ನೂರೆಂಟು ಹಾಲರವಿ ಸೇವೆ ಹಾಗೂ ರಥೋತ್ಸವ ನಡೆಯಿತು.
ಮಧ್ಯಾಹ್ನ ೧೨.೨೮ಕ್ಕೆ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಚಾಲನೆ ನೀಡಿದರು. ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹವನ್ನು ರಥದಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಯಾವುದೇ ವಿಶೇಷ ಅತಿಥಿಯನ್ನು ಆಹ್ವಾನಿಸದೇ ಭಕ್ತರಿಂದಲೇ ಕಾರ್ಯಕ್ರಮದ ಉದ್ಘಾಟನೆ ನಡೆಸಿದ್ದು ಕ್ಷೇತ್ರದ ವಿಶೇಷವಾಗಿತ್ತು.
ಹರಿದುಬಂದ ಭಕ್ತಸಾಗರ!!
ಆಷಾಢದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಭೀಮನ ಅಮಾವಾಸ್ಯೆಯಂದು ಸಹ ಲಕ್ಷಕೂ ಹೆಚ್ಚು ಭಕ್ತರು ಆಗಿಮಿಸಿದ್ದರು. ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಕ್ಷೇತ್ರದ ವತಿಯಿಂದ ಕ್ರಮಕೈಗೊಳ್ಳಲಾಗಿತ್ತು. ಕಾರ್ಯಕ್ರಮದ ಪ್ರಯುಕ್ತ
ಹೊಸದಾಗಿ ನಿರ್ಮಿಸಿರುವ ೨೫ ಅಡಿ ಎತ್ತರ ತೇರನ್ನು ದೇವಿಗೆ ಸಮರ್ಪಿಸಿಲಾಯಿತು ಜೊತೆಗೆ, ನೂತನ ದಾಸೋಹ ಭವನವನ್ನು ಸಹ ಇದೆವೇಳೆ ಉದ್ಘಾಟಿಸಲಾಯಿತು. ರಾಜ್ಯದ ಮೂಲೆಮೂಲೆಗಳಿಂದಲೂ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಹರಿದುಬಂದಿದ್ದರು. ಎಲ್ಲರಿಗೂ ಕ್ಷೇತ್ರದ ವತಿಯಿಂದ ದಾಸೋಹ ಏರ್ಪಡಿಸಲಾಗಿತ್ತು.
ಮ್ಯೂಸಿಯಂ ಲೋಕಾರ್ಪಣೆ!
ಕ್ಷೇತ್ರದಲ್ಲಿ ನಿರ್ಮಿಸಿರುವ ಇಡೀ ರಾಜ್ಯದಲ್ಲೇ ವಿಶೇಷ ಎನ್ನಬಹುದಾದ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡಲಾಯಿತು. ಮ್ಯೂಸಿಯಂ ಒಳಗೆ ಇತಿಹಾಸ, ಆಧ್ಯಾತ್ಮ ಸೇರಿದಂತೆ ಎಲ್ಲ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳು ಇದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರು, ಅವರು ನೀಡಿದ ಕೊಡುಗೆಗಳ ವಿವರ. ನಮ್ಮ ಗ್ರಾಮೀಣ ಭಾಗದ ಸೊಗಡು ತಿಳಿಸುವ ಪರಿಸರ, ಮೈಸೂರು ಯದವಂಶಕ್ಕೆ ಸಂಬಂಧಿಸಿದ ವಿವರ ಸೇರಿದಂತೆ ದೇಶ ಹಾಗೂ ರಾಜ್ಯದ ಇತಿಹಾಸದ ಮಾಹಿತಿ ಇದೆ.
ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ ಸೇರಿದಂತೆ ಸಪ್ತನದಿಗಳ ಕುರಿತು ಮಾಹಿತಿ ಇದ್ದು, ಸಪ್ತನದಿಗಳ ಉಗಮ ಸ್ಥಾನ, ಎಲ್ಲಿ ಹರಿಯುತ್ತದೆ, ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟುಗಳು, ಎಷ್ಟು ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಇದರಿಂದ ಅನುಕೂಲವಾಗಿದೆ ಎಂಬ ಸಂಪೂರ್ಣ ಮಾಹಿತಿ ಇದೆ. ಇದರೊಂದಿಗೆ ೧೨ ಜ್ಯೋತಿರ್ಲಿಂಗ, ಹಳೇ ಕಾಲದ ನಾಣ್ಯಗಳು, ವಿದೇಶಿ ಕರೆನ್ಸಿ ಸೇರಿದಂತೆ ಸಪ್ತಋಷಿಗಳು, ಸಪ್ತಮಾತ್ರಿಕೆಯರ ಮಣ್ಣಿನ ಪ್ರತಿಮೆ, ಜ್ಞಾನ ಮಂಟಪ ಇದೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಮತ್ತು ಮಕ್ಕಳಿಗೆ ನಮ್ಮ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ತಿಳಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಮ್ಯೂಜಿಯಂ ನಿರ್ಮಿಸಲಾಗಿದೆ ಎಂದು ಡಾ.ಮಲ್ಲೇಶ್ ಗುರೂಜೀ ಮಾಹಿತಿ ನೀಡಿದರು.
ಕ್ಷೇತ್ರದಲ್ಲಿ ನಡೆಯುವ ಭೀಮನ ಅಮಾವಾಸ್ಯೆ ಕಾರ್ಯಕ್ರಮ ಬಹಳ ವಿಶೇಷವಾಗಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಎಲ್ಲಾ ಭಕ್ತರಿಗೂ ಯಾವುದೇ ಸಮಸ್ಯೆಯಾಗದಂತೆ ಕ್ಷೇತ್ರದ ವತಿಯಿಂದ ಕ್ರಮಕೈಗೊಳ್ಳಲಾಗಿತ್ತು. ಕ್ಷೇತ್ರಕ್ಕೆ ಭಕ್ತರೇ ಆಸ್ತಿಯಾಗಿದ್ದು, ಅವರ ಕೈಯಿಂದಲೇ ಹೊಸತೇರು, ದಾಸೋಹ ಭವನ ಹಾಗೂ ಮ್ಯೂಜಿಯಂ ಉದ್ಘಾಟಿಸಲಾಯಿತು. ಸರ್ವ ಜೀವರಾಶಿಗಳ ಒಳಿತಿಗಾಗಿ ತಾಯಿಯಲ್ಲಿ ಪ್ರಾರ್ಧಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಕ್ಷೇತ್ರದ ವತಿಯಿಂದ ಕೃತಜ್ಞತೆಗಳು.
– ಮಲ್ಲೇಶ್ ಗೂರೂಜೀ, ಕ್ಷೇತ್ರದ ಧರ್ಮದರ್ಶಿ.
–